ನ್ಯೂಸ್

ಐಸಿಸ್​ ಸೇರಲು ದೇಶ ತೊರೆದಿದ್ದ ಕೇರಳದ ಮಹಿಳೆಯರಿಬ್ಬರಿಗೆ ಆಫ್ಘಾನ್​ನಲ್ಲಿ ನರಕ ದರ್ಶನ: ತವರಿಗೆ ಮರಳುವ ಬಯಕೆ

ತಿರುವನಂತಪುರಂ: ಅಫ್ಘಾನಿಸ್ತಾನದಲ್ಲಿನ ಇಸ್ಲಾಮಿಕ್​ ಸ್ಟೇಟ್​ ನೇತೃತ್ವದ ಸಮುದಾಯವನ್ನು ಸೇರಲು ತಮ್ಮ ಗಂಡಂದಿರೊಂದಿಗೆ ದೇಶವನ್ನೇ ತೊರೆದಿದ್ದ ಕೇರಳ ಮೂಲದ ಇಬ್ಬರು ಮಹಿಳೆಯರು ಇದೀಗ ತವರಿಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇಸ್ಲಾಮಿಕ್​ ಸ್ಟೇಟ್​ ವ್ಯಾಪ್ತಿಯನ್ನು ಉಲ್ಲಂಘಿಸಿ ಆಫ್ಘಾನ್​ ಏಜೆನ್ಸಿಗಳ ಕೈಗೆ ಸಿಕ್ಕಿಬಿದ್ದ ಬಳಿಕ ತವರಿಗೆ ಮರಳುವ ಆಸೆಯನ್ನು ಅವರ ಮುಂದೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ವೆಬ್​ಸೈಟ್​ ಒಂದರಲ್ಲಿ ವಿಡಿಯೋ ಬಿಡುಗಡೆಯಾಗಿದ್ದು, ತಿರುವನಂತಪುರಂ ನಿವಾಸಿ ಫಾತಿಮಾ ಅಲಿಯಾಸ್ ನಿಮಿಷಾ ಮತ್ತು ಎರ್ನಾಕುಲಂ ನಿವಾಸಿ ಸೋನಿಯಾ ಸೆಬಾಸ್ಟಿಯನ್​ ಅಲಿಯಾನ್​​ ಆಯೇಷಾ ತವರಿಗೆ ಮರಳುವ ಆಸೆ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಗಂಡಂದಿರನ್ನು ಅಫ್ಘಾನಿಸ್ತಾನದಲ್ಲೇ ಹತ್ಯೆಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ನಿಮಿಷಾ ಮತ್ತು ಸೋನಿಯಾರನ್ನು ಕಾಲೇಜು ದಿನಗಳಲ್ಲಿ ಹಿಂದು ಮತ್ತು ಕ್ರಿಶ್ಚಿಯನ್​ ಧರ್ಮದಿಂದ ಇಸ್ಲಾಂಗೆ ಮತಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮತಾಂತರ ಬಳಿಕ ನಿಮಿಷಾ ಮುಸ್ಲಿಂ ಮತಾಂತರಿ ಎಸಾ ಎಂಬುವನನ್ನು ಮದುವೆಯಾಗಿದ್ದಳು. ಸೋನಿಯಾ ಕಾಸರಗೋಡಿನ ಐಎಸ್​ ನಾಯಕ ಅಬ್ದುಲ್​ ರಶೀದ್​ ಜತೆ ವಿವಾಹವಾಗಿದ್ದಳು.

ಆಫ್ಘಾನಿಸ್ತಾನದ ಜೀವನದಿಂದ ದುಃಖಿತರಾಗಿರುವ ಸೋನಿಯಾ ತನ್ನ ಪತಿಯ ಮನೆಗೆ ಹಿಂದಿರುಗುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ನಿಮಿಷಾ ತನ್ನ ತಾಯಿಯನ್ನು ಸೇರುವ ಇಚ್ಛೆಯನ್ನು ತಿಳಿಸಿದ್ದಾಳೆ. (ಏಜೆನ್ಸೀಸ್​)