ನ್ಯೂಸ್

ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ರದ್ದು: ಕೆ.ಎ. ಪಾಲ್ | Nimisha Priya

Nimisha Priya: ಯೆಮೆನ್​ನಲ್ಲಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ಇದೀಗ ರದ್ದಾಗಿದೆ. ಶೀಘ್ರವೇ ಆಕೆ ಭಾರತಕ್ಕೆ ಮರಳಲಿದ್ದಾರೆ ಎಂದು ಗ್ಲೋಬಲ್ ಪೀಸ್ ಇನಿಷಿಯೇಟಿವ್ ಸಂಸ್ಥಾಪಕ, ಡಾ. ಕೆ.ಎ. ಪಾಲ್ ಹೇಳಿದ್ದಾರೆ.

ಈ ಕುರಿತು ಯೆಮೆನ್​ನಿಂದಲೇ ವಿಡಿಯೋ ಹರಿಬಿಟ್ಟಿರುವ ಕೆ.ಎ. ಪಾಲ್, ‘ಯೆಮೆನ್ ಮತ್ತು ಭಾರತೀಯ ನಾಯಕರ ನಿರಂತರ ಪ್ರಯತ್ನದ ಬಳಿಕ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಈಗ ರದ್ದುಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಯೆಮೆನ್​ನ ನಾಯಕರು ಮತ್ತು ಭಾರತದ ನಾಯಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ದೇವರ ದಯೆ ಆಕೆಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಶೀಘ್ರವೇ ಭಾರತಕ್ಕೆ ಕರೆತರಲಾಗುವುದು ಎಂದು ಹೇಳಿದ್ದಾರೆ.

ಸನಾ ಜೈಲಿನಿಂದ ಓಮನ್, ಜೆಡ್ಡಾ, ಈಜಿಪ್ಟ್, ಇರಾನ್ ಅಥವಾ ಟರ್ಕಿ ಮೂಲಕ ನಿಮಿಷಾ ಪ್ರಿಯಾಳನ್ನು ಸುರಕ್ಷಿತವಾಗಿ ಕಳುಹಿಸಲು ಭಾರತ ಸರ್ಕಾರದೊಂದಿಗೆ ಸಹಕರಿಸುವುದಾಗಿ ಪಾಲ್ ತಿಳಿಸಿದ್ದಾರೆ.

ಯೆಮೆನ್​ನೊಂದಿಗೆ ವಿದೇಶಾಂಗ ಸಚಿವಾಲಯ ಸಂಪರ್ಕ

ಕಳೆದ ವಾರ ಭಾರತೀಯ ವಿದೇಶಾಂಗ ಸಚಿವಾಲಯ (MEA) ಯೆಮೆನ್‌ನ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪ್ರಿಯಾ ಬಿಡುಗಡೆಗೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುತ್ತಿರುವುದಾಗಿ ತಿಳಿಸಿತ್ತು. ಯೆಮನ್‌ನಲ್ಲಿನ ಕಾನೂನು ಪ್ರಕ್ರಿಯೆಯನ್ನು ಮುನ್ನಡೆಸಲು ಪ್ರಿಯಾ ಕುಟುಂಬಕ್ಕೆ ವಕೀಲರ ನೆರವು ನೀಡಲು ವಿದೇಶಾಂಗ ಸಚಿವಾಲಯ ವಕೀಲರನ್ನು ನೇಮಿಸಿದೆ ಎಂದು ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.

ಯಾರೀ ಕೇರಳ ನರ್ಸ್​?

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್‌ನ 38 ವರ್ಷದ ನರ್ಸ್ ನಿಮಿಷಾ ಪ್ರಿಯಾ, 2017ರಲ್ಲಿ ಯೆಮೆನ್ ಪ್ರಜೆಯನ್ನು ಕೊಂದ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದಳು. 2020ರಲ್ಲಿ, ಆಕೆಗೆ ಯೆಮೆನ್ ನ್ಯಾಯಾಲಯವು ಮರಣದಂಡನೆ ವಿಧಿಸಿತು. 2025ರ ಜುಲೈ 16ರಂದು ಮರಣದಂಡನೆಗೆ ದಿನಾಂಕ ನಿಗದಿಪಡಿಸಲಾಗಿತ್ತು, ಆದರೆ, ಭಾರತದ ಮಧ್ಯಸ್ಥಿಕೆಯಿಂದ ಆಕೆಗೆ ವಿಧಿಸಿದ್ದ ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.

ಪ್ರಸ್ತುತ ಆಕೆಯನ್ನು ಇರಾನ್ ಬೆಂಬಲಿತ ಹೌತಿಗಳ ನಿಯಂತ್ರಣದಲ್ಲಿರುವ ಯೆಮೆನ್ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿ ಇರಿಸಲಾಗಿದೆ. ಪ್ರಸ್ತುತ, ಡಾ. ಪಾಲ್ ನೀಡಿರುವ ಹೇಳಿಕೆ ಪ್ರಕಾರ, ನಿಮಿಷಾ ಪ್ರಿಯಾ ಹಾಗೂ ಆಕೆಯ ಕುಟಂಬಕ್ಕೆ ದೊಡ್ಡ ರಿಲೀಫ್​ ಸಿಕ್ಕಿದ್ದೇ ಆದರೂ ಮುಂದಿನ ಬೆಳವಣಿಗೆ ಏನು ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್)