Kerala Mass Murder: ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಕೇವಲ ಕೇರಳ ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಪ್ರೇಯಸಿಯೂ ಸೇರಿದಂತೆ ಕುಟುಂಬದ ಐವರನ್ನು 23 ವರ್ಷದ ಯುವಕನೊಬ್ಬ ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಈ ಕೊಲೆಯ ಹಿಂದಿರುವ ಕಾರಣವೇನು? ತನ್ನವರನ್ನೇ ಇಷ್ಟೂ ಕ್ರೂರವಾಗಿ ಹತ್ಯೆಗೈಯುವ ಉದ್ದೇಶ ಏನಿತ್ತು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಇದೀಗ ಕೊನೆಗೂ ಈ ಸಾಮೂಹಿಕ ಹತ್ಯೆಗೆ ಕಾರಣ ಬಹಿರಂಗವಾಗಿದೆ.
ಇದನ್ನೂ ಓದಿ: 18 ವರ್ಷ ತುಂಬುವುದು ಇಷ್ಟವಿಲ್ಲದೇ ತಾನು ಹೆತ್ತ ಮಗನನ್ನು ಭೀಕರವಾಗಿ ಕೊಂದ ತಾಯಿ; ವಿಚಾರಣೆಯಲ್ಲಿ ಬೆಳಕಿಗೆ ಬಂತು ಸ್ಫೋಟಕ ಅಂಶ
ವೆಂಜರಮೂಡು ಹತ್ಯಾಕಾಂಡಕ್ಕೆ ಆರ್ಥಿಕ ಬಿಕ್ಕಟ್ಟು ಪ್ರಮುಖ ಕಾರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಆರೋಪಿ ಅಫಾನ್ ಕುಟುಂಬವು ಲಕ್ಷಾಂತರ ರೂಪಾಯಿ ಸಾಲ ಮಾಡಿತ್ತು. ಇದೇ ಸಾಲ ಸಾಮೂಹಿಕ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸಲಿಗೆ ಮೃತ ಲತೀಫ್ನಿಂದ ಅಫಾನ್ 1.5 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದಿದ್ದ ಎನ್ನಲಾಗಿದೆ. ಈ ಹಣ ವಾಪಾಸ್ ಕೊಡು ಎಂದಿದ್ದೇ ಭೀಕರ ಹತ್ಯೆಗೆ ಕಾರಣವಾಯಿತೇ? ಎಂಬ ಶಂಕೆಯು ಇದೆ. ಆದ್ರೆ, ಇದಕ್ಕೆ ಸ್ಪಷ್ಟ ಉತ್ತರ ಇನ್ನೂ ಲಭಿಸಿಲ್ಲ. ಕಾರಣ, ಆರೋಪಿ ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತನ್ನ ತಾಯಿಯನ್ನು ಸೇರಿ ಒಟ್ಟು ಆರು ಮಂದಿಯನ್ನು ಹತ್ಯೆಗೈಯಲು ಭೀಕರವಾಗಿ ಒಂದೇ ಸುತ್ತಿಗೆಯಿಂದ ಹಲ್ಲೆಗೈದಿದ್ದ ಅಫಾನ್, ಎಲ್ಲರ ಉಸಿರು ನಿಂತಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ತಾನು ವಿಷ ಸೇವಿಸಿ, ಆತ್ಮಹತ್ಯೆಗೆ ಮುಂದಾಗಿದ್ದ. ಸಾವಿಗೆ ಹತ್ತಿರವಾಗುವ ಮೊದಲು ಕಡೆಯದಾಗಿ ಪೊಲೀಸರಿಗೆ ಕರೆ ಮಾಡಿದ ಅಫಾನ್, 6 ಜನರನ್ನು ಸಾಯಿಸಿದ್ದೇನೆ ಎಂದು ತಿಳಿಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಹೆಚ್ಚು ಸಮಯ ವ್ಯರ್ಥ ಮಾಡದ ಪೊಲೀಸರು ತಕ್ಷಣವೇ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ, ಅಫಾನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಅದಾಲತ್ನಲ್ಲಿ ಮೂಡಿದ ಭರವಸೆಯ ಬೆಳಕು : ಪುತ್ರಿಯ ಥಲಸ್ಸೇಮಿಯಾ ಚಿಕಿತ್ಸೆಗೆ ನೆರವು : ಕುಟುಂಬಕ್ಕೆ ಮನೆ, ಇತರ ಸೌಲಭ್ಯ
ಇದೇ ವೇಳೆ ಅಫಾನ್ ತಾಯಿ ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿದ ಖಾಕಿ ಪಡೆ, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ಅಫಾನ್ ತಾಯಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸದ್ಯ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಇನ್ನೂ ಎರಡು ದಿನಗಳ ಕಾಲ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಆತ ಡಿಸ್ಚಾರ್ಚ್ ಆದ ತಕ್ಷಣವೇ ಪೊಲೀಸ್ ಠಾಣೆಗೆ ಕರೆತರಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಅವನನ್ನು ವಶಕ್ಕೆ ಪಡೆದ ನಂತರ, ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರೆಸ್ಟ್ ವಾರೆಂಟ್ ಜಾರಿಗೊಳಿಸಿ, ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಅಟ್ಟಿಂಗಲ್ ಡಿವೈಎಸ್ಪಿ ತಿಳಿಸಿದ್ದಾರೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಅಫಾನ್ ತಾಯಿ ಶೆಮಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಲು ಇನ್ನೂ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ ಕಾರಣ ಪೊಲೀಸರು ಸದ್ಯ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).