ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆಯ ಹೆಸರನ್ನೂ ಪಕ್ಷ ಕೈ ಬಿಟ್ಟಿದೆ. ಈ ಪಟ್ಟಿಯಿಂದ ಪಕ್ಷದ ಹಲವು ನಾಯಕರ ನಡುವೆ ವೈಮನಸ್ಸು ಉಂಟಾಗಿದ್ದು, ಅವರೆಲ್ಲ ಪಕ್ಷದ ವಿರುದ್ಧ ತಿರುಗಿ ನಿಲ್ಲುವಂತಾಗಿದೆ.
ರಾಜ್ಯ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಲತಿಕಾ ಸುಭಾಷ್ ಎತ್ತುಮನೂರ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ಬಯಸಿದ್ದರಂತೆ. ಪಕ್ಷ ಆಕೆಯ ಬಯಕೆಯನ್ನು ಈಡೇರಿಸುವ ನಂಬಿಕೆಯನ್ನೂ ಇಟ್ಟುಕೊಂಡಿದ್ದರಂತೆ. ಆದರೆ ಅದು ಹುಸಿಯಾಗಿದೆ. ಕಾಂಗ್ರೆಸ್ ಲತಿಕಾಗೆ ಟಿಕೆಟ್ ನಿರಾಕರಿಸಿದೆ. ಇದರಿಂದಾಗಿ ಮನನೊಂದಿರುವ ಲತಿಕಾ ಕಾಂಗ್ರೆಸ್ ವಿರುದ್ಧ ವಿಶೇಷ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತಲೆ ಬೋಳಿಸಿಕೊಂಡು ನ್ಯಾಯ ಕೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ. ಹಲವು ವರ್ಷಗಳಿಂದ ಶ್ರಮ ಹಾಕಿ ದುಡಿದ ನಮ್ಮಂತವರನ್ನು ಲೆಕ್ಕದಲ್ಲಿ ಇಟ್ಟುಕೊಂಡಿಲ್ಲ ಎಂದು ಅವರು ದೂರಿದ್ದಾರೆ. ನಾನು ಬೇರಾವುದೇ ಪಕ್ಷವನ್ನು ಸೇರಿಕೊಳ್ಳುವುದಿಲ್ಲ. ಪಕ್ಷೇತರ ಸ್ಫರ್ದಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ