ತಿರುವನಂತಪುರಂ : ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ನೀಲಿ ಮತ್ತು ಬಿಳಿ ಪಡಿತರ ಚೀಟಿದಾರರಿಗೆ 10 ಕೆಜಿ ಹೆಚ್ಚಿನ ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಯೋಜನೆಯನ್ನು ನಿಲ್ಲಿಸಿದ್ದ ಚುನಾವಣಾ ಆಯೋಗದ ನಿರ್ದೇಶನಕ್ಕೆ ಇದೀಗ ಕೇರಳ ಹೈಕೋರ್ಟ್ ತಡೆ ನೀಡಿದೆ. ಈಸ್ಟರ್-ವಿಶು-ರಮಜಾನ್ ಸಮಯಕ್ಕೆ ಆಡಳಿತಾರೂಢ ಪಿನ್ನಾರಿ ವಿಜಯನ್ ಸರ್ಕಾರ ರೂಪಿಸಿದ್ದ ವಿಶೇಷ ಅಕ್ಕಿಯ ವಿತರಣೆಗೆ ಕೋರ್ಟ್ ಸೋಮವಾರ ಹಸಿರು ನಿಶಾನೆ ತೋರಿದೆ.
ಆದ್ಯತೆ ರಹಿತ ಪಡಿತರದಾರರಿಗೆ ಎಂದಿನ ರೇಷನ್ನೊಂದಿಗೆ 10 ಕೆಜಿ ಹೆಚ್ಚು ಅಕ್ಕಿಯನ್ನು 15 ರೂಪಾಯಿ ದರದಲ್ಲಿ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಇತರ ರಾಜಕೀಯ ಪಕ್ಷಗಳು ಏಪ್ರಿಲ್ 6 ರಂದು ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಮಾದರಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಆಕ್ಷೇಪ ಸಲ್ಲಿಸಿದ್ದವು. ಹೀಗಾಗಿ ಚುನಾವಣಾ ಆಯೋಗವು ಉದ್ದೇಶಿಸಲಾದ ಅಕ್ಕಿ ವಿತರಣೆಯನ್ನು ಮುಂದುವರಿಸದಂತೆ ಸರ್ಕಾರಕ್ಕೆ ಸೂಚಿಸಿತ್ತು.
ಈ ಬಗ್ಗೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಜ್ಯ ಸರ್ಕಾರ, ಅದಾಗಲೇ 83.34 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗಾಗಿ ಅಕ್ಕಿಯನ್ನು ಖರೀದಿಸಲಾಗಿದೆ. ಈ ಬಗ್ಗೆ ಬಜೆಟ್ನಲ್ಲಿ ನಿರ್ಧರಿಸಿ 2021 ರ ಫೆಬ್ರವರಿ 4 ರಂದು ಚುನಾವಣೆ ಘೋಷಣೆಯಾಗುವ ಮುಂಚೆಯೇ ಆದೇಶ ಜಾರಿಗೊಳಿಸಲಾಗಿತ್ತು. ಇದು ಯಾವುದೇ ಹೊಸ ಕಾರ್ಯಕ್ರಮವಲ್ಲದ್ದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ವಾದಿಸಿತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಆಶಾ ಅವರು, ಆಯೋಗದ ನಿರ್ದೇಶನಕ್ಕೆ ತಡೆಯಾಜ್ನೆ ನೀಡಿ, ಅಕ್ಕಿ ವಿತರಣೆ ಮುಂದುವರಿಯಬಹುದು ಎಂದಿದ್ದಾರೆ. ಆದಾಗ್ಯೂ ಈ ಜನಹಿತ ಕಾರ್ಯಕ್ರಮವನ್ನು ಆಡಳಿತದಲ್ಲಿರುವ ಪಕ್ಷ ತೆಗೆದುಕೊಳ್ಳುತ್ತಿದೆ ಎಂಬ ಭಾವನೆ ಮೂಡಿಸಿ ಮತದಾರರ ಮೇಲೆ ಪ್ರಭಾವ ಬೀಳುವಂತೆ ನಡೆದುಕೊಳ್ಳಬಾರದು ಎಂದು ಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. (ಏಜೆನ್ಸೀಸ್)