ಪಾಲಕ್ಕಾಡ್ (ಕೇರಳ) : ಆರೋಗ್ಯ ತಪಾಸಣೆಗೆಂದು ಹೋದಾಗ ಡಾಕ್ಟರ್ ಚೀಟಿ ಬರೆದು ಕೊಡುತ್ತಾರೆ. ಅದರಲ್ಲಿ ಏನು ಬರೆದಿದೆ ಎಂದು ನಮಗೆ ಮಾತ್ರ ಓದಲು ಸಾಧ್ಯವಾಗುವುದಿಲ್ಲ. ಆದರೆ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುವವರಿಗೆ ಮಾತ್ರ ಓದಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾವೆಲ್ಲಾ ವೈದ್ಯರನ್ನು ತಮಾಷೆ ಮತ್ತು ಟೀಕೆ ಮಾಡುತ್ತಲೇ ಇರುತ್ತೇವೆ.
ಈ ಮಾತು ತಮಾಷೆಯಾದರೂ ಸತ್ಯ. ವೈದ್ಯರು ಬರೆದು ಕೊಟ್ಟ ಚೀಟಿಯನ್ನು ಅಷ್ಟು ಸುಲಭವಾಗಿ ಯಾರಿಂದಲೂ ಓದಲು ಸಾಧ್ಯವಾಗುವುದಿಲ್ಲ. ಹೀಗಾಗಿ ವೈದ್ಯರನ್ನು ಜನರು ತಮಾಷೆಯಾಗಿ ಟೀಕಿಸುತ್ತಲೇ ಇರುತ್ತಾರೆ. ಇದೀಗ ಕೇರಳದ ವೈದ್ಯರೊಬ್ಬರು ಈ ಅಪವಾದಕ್ಕೆ ನಾನು ಸೇರ್ಪಡೆಯಾಗುವುದಿಲ್ಲ ಎಂದು ಅಂದವಾದ ಅಕ್ಷರದಿಂದ, ಸ್ಪಷ್ಟವಾಗಿ ಚೀಟಿ ಬರೆದು ಕೊಟ್ಟಿದ್ದಾರೆ. ವೈದ್ಯರು ಬರೆದ ಈ ಚೀಟಿಯ ಫೋಟೋ ಇದೀಗ ವೈರಲ್ ಆಗುತ್ತಿದೆ. ಸ್ಪಷ್ಟವಾಗಿ ಬರೆದಿರುವ ಚೀಟಿ ಓದಿದ ನೆಟ್ಟಿಗರು ವೈದ್ಯರನ್ನು ಅಭಿನಂದಿಸುತ್ತಿದ್ದಾರೆ.
ಪಾಲಕ್ಕಾಡ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಕ್ಕಳ ತಜ್ಞರಾಗಿರುವ ಡಾ. ನಿತಿನ್ ನಾರಾಯಣ್ ಅವರು ತಮ್ಮದೇ ಶೈಲಿಯಲ್ಲಿ ಚೀಟಿ ಬರೆದುಕೊಟ್ಟು ಗಮನ ಸೆಳೆಯುತ್ತಿದ್ದಾರೆ. ಇವರ ಅಕ್ಷರ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಅಶ್ವಿಕಾ ಎಂಬ 4 ವರ್ಷದ ಹುಡುಗಿ ಆರೋಗ್ಯ ತಪಾಸಣೆಗೆಂದು ವೈದ್ಯ ಡಾ. ನಿತಿನ್ ನಾರಾಯಣ್ ಬಳಿ ಬಂದಿದ್ದಾಳೆ. ಈ ವೇಳೆ ತಪಾಸಣೆ ನಡೆಸಿ, ಯಾವೆಲ್ಲಾ ಔಷಧಿ ಬೇಕು, ಅದರ ಹೆಸರು ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುವುದನ್ನು ಸ್ಪಷ್ಟವಾಗಿ ಬರೆದುಕೊಟ್ಟಿದ್ದಾರೆ. ಈ ಚೀಟಿಯ ಫೋಟೋ ವೈರಲ್ ಆಗುತ್ತಿದ್ದಂತೆ ವೈದ್ಯರ ಸೊಗಸಾದ ಅಕ್ಷರಕ್ಕೆ ಮೆಚ್ಚುಗೆ ಬರುತ್ತಿದೆ.
"ಸಣ್ಣ ವಯಸ್ಸಿನಲ್ಲಿ ವೈದ್ಯರ ಬಳಿ ಹೋದಾಗ ಅವರು ಬರೆಯುವ ಅಕ್ಷರವನ್ನು ಗಮನಿಸುತ್ತಿದ್ದೆ. ನನ್ನ ಸಹೋದರಿಯ ಸಹಾಯದಿಂದ ಬಾಲ್ಯದಲ್ಲಿ ನಾಲ್ಕು ಗೆರೆಯ ಪುಸ್ತಕದಲ್ಲಿ ಬರೆಯುವುದನ್ನು ಕಲಿತಿದ್ದೆ. ಅಂದವಾಗಿ ಬರೆಯುವುದು ನನ್ನ ನೆಚ್ಚಿನ ಹವ್ಯಾಸ. ಹೀಗಾಗಿ ವೈದ್ಯನಾದ ನಂತರವೂ ಅಂದವಾಗಿ ಬರೆಯುವ ಹವ್ಯಾಸವನ್ನು ಮುಂದುವರಿಸಿದ್ದೇನೆ. ಸಾಮಾನ್ಯವಾಗಿ ಒತ್ತಡದ ಕಾರಣದಿಂದ ವೈದ್ಯರಿಗೆ ನಿಧಾನವಾಗಿ ಮತ್ತು ಸ್ಪಷ್ಟವಾಗಿ ಬರೆಯಲು ಸಾಧ್ಯವಾಗುವುದಿಲ್ಲ" ಎಂದು ಡಾ. ನಿತಿನ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)