ನ್ಯೂಸ್

Kerala Congress Tweet | ಬಿಹಾರವನ್ನು ಬೀಡಿಗಳಿಗೆ ಹೋಲಿಸಿದ ಕೇರಳ ಕಾಂಗ್ರೆಸ್​; ಇದು ನಾಚಿಕೆಗೇಡಿನ ಕೆಲಸ ಎಂದ ಬಿಜೆಪಿ!

Kerala Congress Tweet: ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್​ ಘೋಷಣೆ ಮಾಡಿರುವ ಜಿಎಸ್‌ಟಿ ಸುಧಾರಣೆಗಳ ಬಗ್ಗೆ ಬಿಜೆಪಿಯನ್ನು ಗೇಲಿ ಮಾಡುವ ಭರದಲ್ಲಿ ಕಾಂಗ್ರೆಸ್ ಕೇರಳ ಘಟಕ, ಬಿಹಾರ ರಾಜ್ಯವನ್ನು ಬೀಡಿಗಳಿಗೆ ಹೋಲಿಸಿರುವುದು ಹೊಸ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ.

ಕೇರಳ ಕಾಂಗ್ರೆಸ್​ ಘಟಕ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ, ಬೀಡಿಗಳು ಮತ್ತು ಬಿಹಾರಗಳು ಬಿ ಯಿಂದ ಪ್ರಾರಂಭವಾಗುತ್ತವೆ. ಇದನ್ನು ಮುಂದೆ ಪಾಪವೆಂದು ಪರಿಗಣಿಸಲಾಗುವುದಿಲ್ಲ ಎಂದು ಬರೆದುಕೊಂಡಿದೆ. ಸದ್ಯ ಈ ಪೋಸ್ಟ್​​ನ್ನು ಅಳಿಸಲಾಗಿದ್ದು, ಇದಕ್ಕೆ ಬಿಜೆಪಿ ಸೇರಿದಂತೆ ಅದರ ಮಿತ್ರಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್​ನ ಈ ಹೇಳಿಕೆ ಬಿಹಾರದ ಜನರಿಗೆ ಅವಮಾನ ಮಾಡಿದೆ ಎಂದು ತಿಳಿಸಿದೆ.

ಕಾಂಗ್ರೆಸ್​ ಟ್ವೀಟ್​​ ಕುರಿತು ಅಸಮಧಾನ ವ್ಯಕ್ತಪಡಿಸಿರುವ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಮೊದಲು ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪೂಜ್ಯ ತಾಯಿಗೆ ಮಾಡಿದ ಅವಮಾನ, ಮತ್ತು ಈಗ ಇಡೀ ಬಿಹಾರಕ್ಕೆ ಮಾಡಿದ ಅವಮಾನ. ಕಾಂಗ್ರೆಸ್‌ನ ನಿಜರೂಪ ದೇಶದ ಮುಂದೆ ಪದೇ ಪದೇ ಬಹಿರಂಗಗೊಳ್ಳುತ್ತಿದೆ ಎಂದು ಚೌಧರಿ ಬರೆದಿದ್ದಾರೆ.

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ, ಕಾಂಗ್ರೆಸ್ ಎಲ್ಲಾ ಮಿತಿಗಳನ್ನು ಮೀರಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತಮ್ಮ ಮಿತ್ರ ಪಕ್ಷದ ಹೇಳಿಕೆಗಳನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ಜೆಡಿಯು ನಾಯಕ ಸಂಜಯ್ ಕುಮಾರ್ ಝಾ ಕೂಡ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಇದನ್ನು ಕಾಂಗ್ರೆಸ್‌ನ ಅತ್ಯಂತ ನಾಚಿಕೆಗೇಡಿನ ಕೃತ್ಯ ಎಂದು ಕರೆದಿದ್ದಾರೆ. ಬಿ ಎಂದರೆ ಕೇವಲ ಬೀಡಿ ಎಂದಲ್ಲ, ಬುದ್ಧಿ ಎಂದೂ ಅರ್ಥ, ನಿಮಗೆ ಅದರ ಕೊರತೆಯಿದೆ, ಬಿ ಎಂದರೆ ಬಜೆಟ್ ಎಂದೂ ಅರ್ಥ, ಬಿಹಾರಕ್ಕೆ ವಿಶೇಷ ನೆರವು ಸಿಕ್ಕಾಗಲೆಲ್ಲಾ ಅದು ನಿಮ್ಮನ್ನು ಕೆರಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಷಯವಾಗಿ ಕಾಂಗ್ರೆಸ್ ಇನ್ನೂ ಯಾವುದೇ ರೀತಿಯ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ, ಆದರೆ ಈ ಟ್ವೀಟ್ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ಪ್ರಚಾರದಲ್ಲಿ ಹೊಸ ಅಸ್ತ್ರವನ್ನು ನೀಡಿದೆ.(ಏಜೆನ್ಸೀಸ್​​)