ನ್ಯೂಸ್

ಇನ್ನೇನು ಮೃತದೇಹ ಶವಗಾರದಲ್ಲಿಡಬೇಕು ಅಷ್ಟರಲ್ಲಿ ದಿಢೀರನೆ ಎದ್ದು ಕುಳಿತು ಕಣ್ಣೀರಿಟ್ಟ ಸತ್ತ ವ್ಯಕ್ತಿ!

ನೈರೋಬಿ: ಕೀನ್ಯಾದ ವ್ಯಕ್ತಿಯೊಬ್ಬ ಸಾವನ್ನೇ ಗೆದ್ದು ಬಂದು ಎಲ್ಲರಿಗೂ ಬೆರಗು ಮೂಡಿಸಿದ್ದಾನೆ. ಸತ್ತಿದ್ದಾನೆಂದು ವೈದ್ಯರು ಘೋಷಿಸಿದ ಮೂರು ಗಂಟೆಗಳ ಬಳಿಕ ಕೀನ್ಯಾ ವ್ಯಕ್ತಿಗೆ ಮತ್ತೆ ಪ್ರಜ್ಞೆ ಬಂದಿದೆ. ಆಸ್ಪತ್ರೆಯ ಸಿಬ್ಬಂದಿ ಇನ್ನೇನು ಆತನನ್ನು ಶವಗಾರದಲ್ಲಿ ಇಡಲು ತಯಾರಿ ಮಾಡುವಾಗ ಕಣ್ಣು ಬಿಟ್ಟು ಎಲ್ಲರನ್ನು ದಿಗ್ಭ್ರಾಂತಗೊಳಿಸಿದ್ದಾನೆ.

ಪೀಟರ್​ ಕಿಗೆನ್​ (32), ಮಂಗಳವಾರ ತನ್ನ ಮನೆಯಲ್ಲಿ ಕುಸಿದು ಬಿದ್ದಿದ್ದ. ಬಳಿಕ ಆತನನ್ನು ಕೆರಿವೋ ಕೌಂಟಿಯಲ್ಲಿರುವ ಕಪ್ಕಾಟೆಟ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಪೀಟರ್​ ಮೃತಪಟ್ಟಿದ್ದಾರೆಂದು ಘೋಷಿಸಿದ್ದರು. ಅದಾದ ಬಳಿಕ ಮೃತದೇಹವನ್ನು ಶವಾಗಾರದಲ್ಲಿ ಇಡಲು ತಯಾರಿ ಮಾಡುವಾಗ ಪೀಟರ್ ದಿಢೀರನೇ​ ಎದ್ದು ಕುಳಿತಿದ್ದಾನೆ. ಅವನ ಬಲ ಕಾಲಿನ ಮೇಲೆ ಸೀಳಿದ ಗಾಯದ ನೋವಿನಿಂದ ಅಳುತ್ತಿದ್ದ.

ಪೀಟರ್​ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಮಂಗಳವಾರ ಮನೆಯಲ್ಲಿ ಹೊಟ್ಟೆ ನೋವಿನಿಂದ ಕುಸಿದು ಬಿದ್ದಾಗ ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು ಎಂದು ಪೀಟರ್​ ಕಿರಿಯ ಸಹೋದರ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶವಾಗಾರದಲ್ಲಿ ಮೃತದೇಹಳನ್ನು ಕೊಳೆಯದಂತೆ ಸಂರಕ್ಷಿಸಿ ಇಡಲು ಶವದ ಬಲದ ಕಾಲನ್ನು ಸೀಳಿ ಫಾರ್ಮಾಲಿನ್​ ತುಂಬಲಾಗುತ್ತದೆ. ಆದರೆ, ಸಿಬ್ಬಂದಿ ಸಿದ್ಧತೆ ಮಾಡುವಾಗಲೇ ಪೀಟರ್​ ಎದ್ದು ಕುಳಿತು ಕಾಲಿನ ನೋವಿನಿಂದ ಅಳಲು ಶುರು ಮಾಡಿದರು ಎಂದು ಸಿಬ್ಬಂದಿ ಹೇಳಿದ್ದಾರೆ.

ಎಚ್ಚರಗೊಂಡ ಪೀಟರ್​ನನ್ನು ತಕ್ಷಣ ವಾರ್ಡ್​ಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಲಾಯಿತು. ಪೀಟರ್​ ಸಹ ಎಡವಟ್ಟು ಆಗುವಷ್ಟರಲ್ಲಿ ಮರು ಜೀವ ಪಡೆದುಕೊಂಡಿದ್ದಕ್ಕೆ ಭಾರಿ ಖಷಿ ಪಟ್ಟಿದ್ದಾರೆ. ಆದರೆ, ವೈದ್ಯರ ನಿರ್ಲಕ್ಷ್ಯ ವಿರುದ್ಧ ಪೀಟರ್​ ಕುಟುಂಬದ ಅಸಮಾಧಾನ ಹೊರಹಾಕಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)