ನ್ಯೂಸ್

'1000ಕ್ಕೂ ಹೆಚ್ಚು ಬಾರಿ ಇಡಿ ದಾಳಿ, ಆದರೆ ಒಂದು ಪೈಸೆಯೂ ಸಿಕ್ಕಿಲ್ಲ…': ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ತಂಡ ಬುಧವಾರ ದಾಳಿ ನಡೆಸಿದೆ. ನಾರ್ತ್ ಅವೆನ್ಯೂದಲ್ಲಿರುವ ರಾಜ್ಯಸಭಾ ಸಂಸದರ ಅಧಿಕೃತ ನಿವಾಸದಲ್ಲಿ ಇಡಿ ಈ ಕ್ರಮ ಕೈಗೊಂಡಿದೆ. ಆಪ್ ನಾಯಕ ಸಂಜಯ್ ಸಿಂಗ್ ಮೇಲಿನ ಇಡಿ ದಾಳಿ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿಜಿ ಎಷ್ಟೇ ದಾಳಿ ನಡೆಸಿದರೂ ಎಎಪಿ ಸಂಸದರ ನಿವಾಸದಲ್ಲಿ ಇಡಿಗೆ ಏನೂ ಕಂಡಿಲ್ಲ. ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ, ಆದರೆ ಏನೂ ಸಿಕ್ಕಿಲ್ಲ. 2024 ರ ಚುನಾವಣೆಯಲ್ಲಿ ಅವರು ಸೋಲುತ್ತಾರೆ ಎಂದು ತಿಳಿದಿದೆ. ಇದು ಅವರ ಹತಾಶ ಪ್ರಯತ್ನಗಳು. ಚುನಾವಣೆ ಸಮೀಪಿಸುತ್ತಿದ್ದಂತೆ ಇಡಿ, ಸಿಬಿಐನಂತಹ ಎಲ್ಲ ಸಂಸ್ಥೆಗಳು ಕ್ರಿಯಾಶೀಲವಾಗುತ್ತವೆ ಎಂದರು.

ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರದ ಸಚಿವ ಸೌರಭ್ ಭಾರದ್ವಾಜ್ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಾ, ಮದ್ಯ ಹಗರಣ ಪ್ರಕರಣವನ್ನು ಕಾಲ್ಪನಿಕ ಹಗರಣ ಎಂದು ಬಣ್ಣಿಸಿದ್ದಾರೆ. ಇದೊಂದು ಕಾಲ್ಪನಿಕ ಹಗರಣ. ಪ್ರಕರಣದಲ್ಲಿ ಸಾವಿರಕ್ಕೂ ಹೆಚ್ಚು ದಾಳಿ ನಡೆಸಿ 15 ತಿಂಗಳು ಕಳೆದರೂ ಫಲಿತಾಂಶ ಶೂನ್ಯ. ಮೋದಿಜಿ ಹತಾಶೆಯಲ್ಲಿದ್ದಾರೆ. ಅವರು ಚುನಾವಣೆಯಲ್ಲಿ ಸೋಲುತ್ತಾರೆ, ಆದರೆ ಎಎಪಿ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತದೆ. ಸಂಜಯ್ ಸಿಂಗ್ ಅವರ ಮನೆಯಿಂದಾಗಲೀ ಅಥವಾ ಬೇರೆಲ್ಲಿಂದಾಗಲೀ ಏನೂ ಪತ್ತೆಯಾಗಿಲ್ಲ ಎಂದರು.

ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ್ ರೈ, ಇಡಿ ಕ್ರಮವನ್ನು ಮೋದಿ ಸರ್ಕಾರದ ಭೀತಿ ಎಂದು ಬಣ್ಣಿಸಿದ್ದಾರೆ. ಕಳೆದ 15 ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ದಾಳಿಯಲ್ಲಿ ಏನೂ ಪತ್ತೆಯಾಗಿಲ್ಲ, ಸಂಜಯ್ ಸಿಂಗ್ ಅವರ ಮನೆಯಲ್ಲಿಯೂ ಏನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು. ಪ್ರತಿಪಕ್ಷ ನಾಯಕರ ಮೇಲೆ ಇಡಿ ದಾಳಿ ನಡೆಸಿರುವುದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ಹೀನಾಯವಾಗಿ ಸೋಲಲಿದ್ದಾರೆ ಎಂಬ ಸಂದೇಶ. ಈ ಸೋಲಿನ ಹತಾಶೆಯಿಂದ ಇಡಿ ಇಂದು ಸಂಜಯ್ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿದೆ ಎಂದವರು ತಿಳಿಸಿದ್ದಾರೆ.