ನವದೆಹಲಿ : ಅನ್ಯ ರಾಜ್ಯಗಳಿಗೆ ಹೋಲಿಸಿದರೆ, ದೆಹಲಿಯಲ್ಲಿ ಕರೊನಾ ಮರಣ ದರ ಅತಿಹೆಚ್ಚಾಗಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಕರೊನಾದಿಂದ ಮೃತಪಟ್ಟಿರುವವರ ಸಂಖ್ಯೆಯ ವಿವರಗಳಲ್ಲಿ ದೆಹಲಿಯನ್ನು ಮೊದಲ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ಸರ್ಕಾರ ತಂದುನಿಲ್ಲಿಸಿದೆ ಎಂದು ಬಿಜೆಪಿಯ ದೆಹಲಿ ಪ್ರದೇಶ ಅಧ್ಯಕ್ಷ ಆದೇಶ್ ಗುಪ್ತ ಹೇಳಿದ್ದಾರೆ.
ಟ್ವಿಟರ್ನಲ್ಲಿ ಕೇಜ್ರಿವಾಲ್ ಮೇಲೆ ವಾಗ್ದಾಳಿ ಮಾಡಿರುವ ಗುಪ್ತ, ಕಳೆದ ವರ್ಷದಂತೆಯೇ ಈ ವರ್ಷವೂ ಸಿಎಂ ಕೇಜ್ರಿವಾಲ್ ಅಂಕಿಅಂಶಗಳಲ್ಲಿ ಎಡವಟ್ಟು ಮಾಡಿ, ಕರೊನಾದಿಂದ ಮೃತಪಟ್ಟವರ ಅಸಲಿ ಸಂಖ್ಯೆಯನ್ನು ಮರೆಮಾಚುತ್ತಿದ್ದಾರೆ. ಈ ಮೂಲಕ ಕೆಲಸ ಮಾಡುವುದಕ್ಕಿಂತ ಅವರ ಆದ್ಯತೆ ತಮ್ಮ ವಿಫಲತೆಗಳನ್ನು ಮುಚ್ಚಿಡುವುದೇ ಆಗಿದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಕರೊನಾ ಎರಡನೇ ಅಲೆಯಿಂದಾಗಿ ದೆಹಲಿವಾಸಿಗಳು ಚಿಕಿತ್ಸಾ ಸೌಲಭ್ಯ ಲಭಿಸದೆ ಸಾವಪ್ಪುತ್ತಿದ್ದರೆ, ಕೇಜ್ರಿವಾಲ್, ಹಾಳಾಗುತ್ತಿರುವ ಪರಿಸ್ಥಿತಿಯ ಹೊಣೆಯನ್ನು ಯಾರ ಮೇಲೆ ಹೇರಬೇಕೆಂಬ ಯೋಚನೆಯಲ್ಲಿದ್ದರು. ತಮ್ಮ ಹೊಣೆಗಾರಿಕೆಯಿಂದ ದೂರ ಓಡುವುದು ಕೇಜ್ರಿವಾಲ್ರ ಅಭ್ಯಾಸವಾಗಿ ಹೋಗಿದೆ ಎಂದಿದ್ದಾರೆ.
ಏಪ್ರಿಲ್ 1 ರಿಂದ ಮೇ 17 ರ ನಡುವೆ ದೆಹಲಿಯ ಮೂರು ನಗರ ನಿಗಮಗಳಲ್ಲಿರುವ ಸ್ಮಶಾನ ಮತ್ತು ಖಬರಿಸ್ತಾನಗಳಲ್ಲಿ 16,593 ಶವಗಳ ಅಂತಿಮ ಸಂಸ್ಕಾರ ಕರೊನಾ ವಿಧಾನದಂತೆ ನಡೆದಿದೆ ಎಂದು ಅಂಕಿಅಂಶಗಳು ತೋರಿಸಿವೆ. ಆದರೆ, ಈ ಸಮಯದಲ್ಲಿ ಕೇಜ್ರಿವಾಲ್ ಸರ್ಕಾರ ಕರೊನಾ ಮರಣ ಸಂಖ್ಯೆಯನ್ನು 11,061 ರಷ್ಟಿದೆ ಎಂದು ಹೇಳಿದೆ. ನಗರ ನಿಗಮದ ಪ್ರಕಾರ ಏಪ್ರಿಲ್ ಕೊನೆಯ ವಾರದಲ್ಲಿ ದಿನಕ್ಕೆ 700 ಕ್ಕಿಂತ ಹೆಚ್ಚು ಕರೊನಾ ರೋಗಿಗಳ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ, ಸರ್ಕಾರ ಪ್ರತಿದಿನ 450 ಕ್ಕಿಂತ ಹೆಚ್ಚು ಸಾವು ಸಂಭವಿಸಿಲ್ಲ ಎಂದು ಹೇಳಿತು ಎಂದಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಾ ಕರೊನಾ ಸೋಂಕಿಗೆ ಗುರಿಯಾಗಿ ಮೃತಪಟ್ಟ ನೂರಾರು ಕರೊನಾ ವಾರಿಯರ್ಗಳ ಕುಟುಂಬಗಳು ಸರ್ಕಾರದ ಸಹಾಯಕ್ಕೆ ಕಾಯುತ್ತಿದ್ದರೂ, ಅವರ ಬಗ್ಗೆ ಸಿಎಂ ಗಮನ ಹರಿಸುತ್ತಿಲ್ಲ. ಮೃತರನ್ನು ಪಿಕ್ ಅಂಡ್ ಚೂಸ್ ಪಾಲಿಸಿಯ ಆಧಾರದ ಮೇಲೆ ಕರೊನಾ ವಾರಿಯರ್ಗಳೆಂದು ಸನ್ಮಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.