ನ್ಯೂಸ್

Tirupati Laddu Row| ದೇವರು ರಾಜಕೀಯದಿಂದ ದೂರವಿರಲಿ; ಟಿಡಿಪಿ ಸರ್ಕಾರಕ್ಕೆ ಛೀಮಾರಿ ಹಾಕಿದ ‘ಸುಪ್ರೀಂ’

ನವದೆಹಲಿ: ತಿರುಪತಿ ಪ್ರಸಾದ ಲಡ್ಡು ವಿವಾದ(Tirupati Laddu Row)ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​​ ಸೋಮವಾರ (ಸೆಪ್ಟೆಂಬರ್​​ 30) ಆಂಧ್ರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ತಿರುಮಲ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬುದು ಸ್ಪಷ್ಟವಾಗದಿರುವಾಗ ಮಾಧ್ಯಮಗಳಿಗೆ ಹೋಗುವ ಅಗತ್ಯ ಏನಿತ್ತು ಎಂದು ಕೇಳಿದೆ.

ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರಿರುವ ದ್ವಿಸದಸ್ಯ ಪೀಠವು, ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ಆದರೆ ದೇವರು ರಾಜಕೀಯದಿಂದ ದೂರವಿರಲಿ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದೆ.

ನೀವು ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಇದು ಲಡ್ಡು ಮಾಡಲು ಬಳಸುತ್ತಿದ್ದ ತುಪ್ಪವೇ ಎಂಬುದಕ್ಕೆ ಪುರಾವೆ ಎಲ್ಲಿದೆ? ಪ್ರಸಾದವನ್ನು ದೇವರಿಗೆ ಅರ್ಪಿಸಿದ ನಂತರ ತಯಾರಿಸಲಾಗುತ್ತದೆ. ಅದಕ್ಕಿಂತ ಮೊದಲು ಅದು ಸಿದ್ಧಪಡಿಸಿದ ಸಿಹಿತಿಂಡಿ ಮಾತ್ರ. ಹೀಗಿರುವಾಗ ದೇವರ ಪ್ರಸಾದ ಎನ್ನದೆ ವಿವಾದದಿಂದ ದೂರ ಇಡಬೇಕು. ಜುಲೈ ತಿಂಗಳ ವರದಿಯನ್ನು ಸಾರ್ವಜನಿಕಗೊಳಿಸಿದೆ ಎನ್ನಲಾಗಿದೆ. ಆದರೆ ಸಿಎಂ ಸೆಪ್ಟೆಂಬರ್‌ನಲ್ಲಿ ಮಾತ್ರ ಈ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಈ ವರದಿ ನೋಡಿದರೆ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿಲ್ಲ ಎಂದು ಅನಿಸುತ್ತಿದೆ ಎಂದು ನ್ಯಾಯಾಲಯ ಆಂಧ್ರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಸರ್ಕಾರವು ತನಿಖೆಗಾಗಿ ಎಸ್‌ಐಟಿ ರಚಿಸಿರುವಾಗ, ಎಸ್‌ಐಟಿ ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಸಿಎಂ ಪತ್ರಿಕೆಗಳಲ್ಲಿ ಹೇಳಿಕೆ ನೀಡುವ ಅಗತ್ಯ ಏನಿತ್ತು ಎಂದು ಸುಪ್ರೀಂಕೋರ್ಟ್ ಕೇಳಿದೆ. ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವ ಜನರಿಂದ ಜವಾಬ್ದಾರಿಯನ್ನು ನಿರೀಕ್ಷಿಸಲಾಗಿದೆ. ತನಿಖೆಯ ಫಲಿತಾಂಶದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ನೀವು ಹೇಗೆ ಹೇಳಿಕೆ ನೀಡಿದ್ದೀರಿ? ನೀವು ಈಗಾಗಲೇ ಹೇಳಿಕೆ ನೀಡುತ್ತಿದ್ದರೆ ತನಿಖೆಯ ಅರ್ಥವೇನು?

ಅದೇ ತುಪ್ಪವನ್ನು ಬಳಸಲಾಗಿದೆ ಮತ್ತು ಖರೀದಿಸಲಾಗಿದೆ ಎಂದು ತೋರಿಸಲು ಪ್ರಾಥಮಿಕವಾಗಿ ಯಾವುದೇ ಖಚಿತವಾದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ತನಿಖೆ ಬಾಕಿ ಇರುವಾಗಲೂ ಜವಾಬ್ದಾರಿಯುತ ಸಾರ್ವಜನಿಕ ಅಧಿಕಾರಿಗಳು ಇಂತಹ ಹೇಳಿಕೆಗಳನ್ನು ನೀಡಿದಾಗ ಅದು SIT ಮೇಲೆ ಯಾವ ಪರಿಣಾಮ ಬೀರುತ್ತದೆ? ದೂರುಗಳಿದ್ದಲ್ಲಿ ಪ್ರತಿ ಟ್ಯಾಂಕರ್‌ನಿಂದ ಮಾದರಿಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ತಿಳಿಸಿದೆ.

ಬಳಿಕ ಯಾರನ್ನು ತನಿಖೆ ಮಾಡಬೇಕು ಎಂದು ಕೇಂದ್ರವೇ ಉತ್ತರಿಸಬೇಕು ಎಂದು ಸುಪ್ರೀಂಕೋರ್ಟ್ ಕೇಳಿದೆ. ಈ ಕುರಿತು ಮುಕುಲ್ ರೋಹಟಗಿ ಹಿರಿಯ ಅಧಿಕಾರಿಗೆ ಜವಾಬ್ದಾರಿ ವಹಿಸಬಹುದು ಎಂದು ಹೇಳಿದರು. ಈಗಿರುವ ಎಸ್‌ಐಟಿಯಿಂದ ತನಿಖೆ ನಡೆಸಬೇಕೋ ಅಥವಾ ಬೇರೆಯವರಿಂದ ತನಿಖೆ ನಡೆಸಬೇಕೋ ಎಂಬುದನ್ನು ತಿಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಈಗ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಗಯನ್ನು ಗುರುವಾರ ಅಂದರೆ ಅಕ್ಟೋಬರ್ 3 ರಂದು ನಡೆಸಲಿದೆ.(ಏಜೆನ್ಸೀಸ್​​)