ನ್ಯೂಸ್

ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಾಣ ಸಾಧ್ಯವಿಲ್ಲ; ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಮುಂಬೈ: ದೆಹಲಿಯ ಬುರಾರಿಯಲ್ಲಿ ಕೇದಾರನಾಥ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಧ್ಯಾತ್ಮಿಕ ಒಗ್ಗಟ್ಟಿನ ಮಹತ್ವದ ಪ್ರದರ್ಶನದಲ್ಲಿ ಜ್ಯೋತಿರ್​​​ ಮಠದ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸವಾದ ಮಾತೋಶ್ರೀಗೆ ಭೇಟಿ ನೀಡಿದರು.

ಈ ವೇಳೆ ಕೇದಾರನಾಥ ದೇವಾಲಯಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಪಾವಿತ್ರ್ಯದ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಕೇದಾರನಾಥ ದೇವಾಲಯವನ್ನು ದೆಹಲಿಯಲ್ಲಿ ಮಾಡಲು ಸಾಧ್ಯವಿಲ್ಲ, ಇದು ತಪ್ಪು. ಶಿವಪುರಾಣದಲ್ಲಿ ಹೆಸರು ಮತ್ತು ಸ್ಥಳದೊಂದಿಗೆ ಹನ್ನೆರಡು ಜ್ಯೋತಿರ್​​ಲಿಂಗಗಳನ್ನು ಉಲ್ಲೇಖಿಸಲಾಗಿದೆ. ಕೇದಾರನಾಥದ ವಿಳಾಸ ಹಿಮಾಲಯದಲ್ಲಿರುವಾಗ ಅದು ದೆಹಲಿಯಲ್ಲಿ ಹೇಗೆ ಇರುತ್ತದೆ?. ಸಾಂಕೇತಿಕವಾಗಿ ದೆಹಲಿಯಲ್ಲಿ ಕೇದಾರನಾಥ ದೇವಾಲಯ ಇರಬಾರದು ಎಂದು ಹೇಳಿದ್ದಾರೆ.

ಕೇದಾರನಾಥದಲ್ಲಿ 228 ಕೆಜಿ ಚಿನ್ನದ ಹಗರಣ ನಡೆದಿದೆ. ಯಾರೂ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲಿ ಹಗರಣ ನಡೆದ ನಂತರ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣವಾಗುತ್ತದೆ. ಇಲ್ಲಿಯವರೆಗೆ ಅದರ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಇದಕ್ಕೆ ಯಾರು ಹೊಣೆ? ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಿಸಲಾಗುವುದು ಎಂದು ಹೇಳಲಾಗುತ್ತಿದೆ. ಇದು ಆಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಉದ್ಧವ್ ಠಾಕ್ರೆ ವಿರುದ್ಧದ ದ್ರೋಹದ ಬಗ್ಗೆ ಮಾತನಾಡಿದ ಸ್ವಾಮಿ ಅವಿಮುಕ್ತೇಶ್ವರಾನಂದರು, ನಾವು ಹಿಂದೂ ಧರ್ಮವನ್ನು ಅನುಸರಿಸುತ್ತೇವೆ. ಪುಣ್ಯ ಮತ್ತು ಪಾಪವನ್ನು ನಂಬುತ್ತೇವೆ. ವಿಶ್ವಾಸದ್ರೋಹ ದೊಡ್ಡ ಪಾಪಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಉದ್ಧವ್ ಠಾಕ್ರೆ ಅವರ ವಿಚಾರದಲ್ಲೂ ಅದೆ ನಡೆದಿದೆ. ಅವರು ನನ್ನನ್ನು ಕರೆದರು ನಾನು ಇಲ್ಲಿಗೆ ಬಂದಿದ್ದೇನೆ. ಅವರಿಗೆ ಮಾಡಿದ ದ್ರೋಹದ ಬಗ್ಗೆ ನಮಗೆ ನೋವಾಗಿದೆ. ಅವರು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ನಮ್ಮ ನೋವು ಹೋಗುವುದಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಅವರಿಗೆ ಆಶೀರ್ವಾದ ಮಾಡಿದ್ದೇವೆ. ನರೇಂದ್ರ ಮೋದಿ ನಮ್ಮ ಶತ್ರು ಅಲ್ಲ, ನಾವು ಅವರ ಹಿತೈಷಿಗಳು, ಯಾವಾಗಲೂ ಅವರ ಕಲ್ಯಾಣವನ್ನು ಬಯಸುತ್ತೇವೆ. ಯಾರೇ ತಪ್ಪು ಮಾಡಿದರು ನಾವು ಅದರ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​​)