ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಶೂಟಿಂಗ್ ಕೆಲಸ ಈಗಷ್ಟೇ ಶುರುವಾದರೂ, ಮೊದಲಿನಂತೆ ಬಿರುಸಾಗಿಲ್ಲ. ಅದರಲ್ಲೂ ಸಿನಿಮಾವನ್ನೇ ನಂಬಿ ಜೀವನ ನಡೆಸುತ್ತಿದ್ದವರ ಬದುಕು ಅತಂತ್ರವಾಗಿದೆ. ಸ್ಟಾರ್ ನಟರು ಕೈಲಾದಷ್ಟು ಸಹಾಯ ಮಾಡಿದ್ದಾರೆ. ಈಗಲೂ ಆ ಕಾರ್ಯ ಮುಂದುವರಿದಿದೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಸಹ ಸೇವೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ರಜನಿಸಂಗೆ 45 ವರ್ಷ … ಸಂಭ್ರಮಾಚರಣೆ ಶುರು …
ಹೌದು, 100ಕ್ಕೂ ಅಧಿಕ ಹಿನ್ನೆಲೆ ನೃತ್ಯಗಾರರಿಗೆ ಕತ್ರಿನಾ ಧನಸಹಾಯ ಮಾಡಿದ್ದಾರೆ. ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಕತ್ರಿನಾ ಅವರ ಈ ಕೆಲಸಕ್ಕೆ ಡಾನ್ಸರ್ಸ್ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅವರ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.
ಹಾಗೆ ವರ್ಗಾವಣೆ ಮಾಡಿದ ಹಣದಿಂದ ಈಗಾಗಲೇ ಹಲವು ನೃತ್ಯಗಾರರು ಸಣ್ಣ ಉದ್ಯಮಗಳನ್ನು ಶುರು ಮಾಡಿದ್ದು, ತರಕಾರಿ ಮಾರಾಟ ಸೇರಿ ರಸ್ತೆ ಬದಿಯಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದಾರೆ. ಇನ್ನು ಕೆಲವರು ನೇರವಾಗಿ ಎಪಿಎಂಸಿಯಿಂದ ತರಕಾರಿ ಖರೀದಿಸಿ ಮನೆ ಮನೆಗೆ ತಳ್ಳುವ ಗಾಡಿಯ ಮೂಲಕ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಈ ಹಿಂದೆ ನಟ ವರುಣ್ ಧವನ್ ಸಹ ಡಾನ್ಸರ್ಗಳ ಸಹಾಯಕ್ಕೆ ಧಾವಿಸಿದ್ದರು. ನೇರವಾಗಿ ಅವರ ಖಾತೆಗೆ ಹಣವನ್ನು ಜಮೆ ಮಾಡಿದ್ದರು. ಇನ್ನು ಕೆಲವು ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನೂ ವಿತರಿಸಿದ್ದರು. ಇದೀಗ ಆ ಕೆಲಸವನ್ನು ಕತ್ರಿನಾ ಕೈಫ್ ಮಾಡುತ್ತಿದ್ದಾರೆ. (ಏಜೆನ್ಸೀಸ್)