ನ್ಯೂಸ್

ಪ್ರೀತಿ ತಿರಸ್ಕರಿಸಿದವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಹೂತಿಟ್ಟ!

ಜಮ್ಮು ಕಾಶ್ಮೀರ: ಪ್ರೀತಿಗೆ ಒಪ್ಪದ ಯುವತಿ ರುಂಡ ಕಡಿದು, ಕೈಕಾಲುಗಳನ್ನು ತುಂಡರಿಸಿ ಊರ ತುಂಬೆಲ್ಲಾ ಎಸೆದು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಭಯಾನಕ ಘಟನೆಯೊಂದು ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

ಶಬ್ಬೀರ್ ಅಹ್ಮದ್​ ಬಂಧಿತ ಆರೋಪಿ. ಈತ ಬದ್ಗಾಮ್ ಜಿಲ್ಲೆಯ ಓಂಪೋರಾ ಪ್ರದೇಶದ ನಿವಾಸಿ. ಪ್ರೀತಿ ತಿರಸ್ಕರಿಸಿದ ಯುವತಿಯನ್ನು ಕೊಂದು ಪೊಲೀಸರ ಅತಿಥಿಯಾಗಿದ್ದಾನೆ.

ಕಾರ್ಪೆಂಟರ್​ ಕೆಲಸಕ್ಕಾಗಿ ಯುವತಿ ಮನೆಗೆ ಬಂದಿದ್ದ. ಬಂದ ಮೊದಲ ದಿನವೇ ಆಕೆಯನ್ನು ಇಷ್ಟಪಟ್ಟಿದ್ದ, ಯುವತಿ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ್ದಾಳೆ ಆಗ ಕೋಪಗೊಂಡ ಆತ ಯುವತಿಯನ್ನು ಹತ್ಯೆ ಮಾಡಿದ್ದಾನೆ. ಆಕೆಯ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬದ್ಗಾಮ್ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಎಸೆದಿದ್ದನು.

ಯುವತಿ ಕಾಣುತ್ತಿಲ್ಲವೆಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ಮಾರ್ಚ್ 7 ರಂದು ಮನೆಯಿಂದ ಕೋಚಿಂಗ್ ತರಗತಿಗಳಿಗೆ ಹೋಗಿದ್ದರು ಆದರೆ ಸಂಜೆ ಮನೆಗೆ ಹಿಂತಿರುಗಿರಲಿಲ್ಲ. ಬಳಿಕ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು. ಯುವತಿಯ ಕರೆ ವಿವರದ ಮೇಲೆ ಈ ಬಂಧನ ಸಾಧ್ಯವಾಗಿದೆ.

ಆರೋಪಿಯೂ ಕೂಡ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ವಿವಾಹಿತನಾಗಿದ್ದಾನೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.