ನ್ಯೂಸ್

ಕಾಶ್ ಪಟೇಲ್ ಎಫ್​ಬಿಐ ಬಾಸ್; ಅಮೆರಿಕದ ತನಿಖಾ ಸಂಸ್ಥೆಗೆ ಗುಜರಾತ್ ಮೂಲದ ಮುಖ್ಯಸ್ಥ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ಎಫ್​ಬಿಐ (ಫೆಡರಲ್ ಬ್ಯುರೋ ಆಫ್ ಇನ್​ವೆಸ್ಟಿಗೇಷನ್) ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದಾರೆ.

‘ಪಟೇಲ್ ಅವರು ಈ ಮೊದಲು ರಷ್ಯಾದ ವಂಚನೆಯನ್ನು ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಸತ್ಯ, ಹೊಣೆಗಾರಿಕೆ ಮತ್ತು ಸಂವಿಧಾನದ ಪ್ರತಿಪಾದಕರಾಗಿದ್ದಾರೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ನೂತನ ಸರ್ಕಾರದಲ್ಲಿ ಕಾನೂನು ಜಾರಿ ಮತ್ತು ಗುಪ್ತಚರ ಏಜೆನ್ಸಿಗಳಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ಇದಕ್ಕೆ ಅನುಗುಣವಾಗಿ ಅವರು ತಮ್ಮ ಕಟ್ಟಾ ಬೆಂಬಲಿಗ ಕಾಶ್ ಪಟೇಲ್ ಅವರನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಎಫ್​ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ರಾಜೀನಾಮೆ ನೀಡಬೇಕಿದೆ ಅಥವಾ ಜನವರಿ 20ರಂದು ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಅವರು ವಜಾಗೊಳ್ಳಲಿದ್ದಾರೆ.

ವಿರೋಧ ಸಾಧ್ಯತೆ: ಪ್ರಸ್ತುತ ಎಫ್​ಬಿಐ ನಿರ್ದೇಶಕ ಕ್ರಿಸ್ಟೋಫರ್​ಗೆ ಹೋಲಿಕೆ ಮಾಡಿದರೆ ಕಾಶ್ ಪಟೇಲ್ ಹೆಚ್ಚಿನ ಅನುಭವ ಹೊಂದಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದೆ. ಟ್ರಂಪ್ ಈಗಾಗಲೇ ಹಲವರನ್ನು ವಿವಿಧ ಹಂತಗಳಲ್ಲಿ ಉನ್ನತ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ್ದಾರೆ. ಈ ಪ್ರಸ್ತಾವನೆ ಸೆನೆಟ್​ನಲ್ಲಿ ಅಂಗೀಕಾರಗೊಂಡರೆ ಮಾತ್ರ ಅವರ ಆಯ್ಕೆಗಳು ದೃಢೀಕರಣಗೊಳ್ಳಲಿದೆ. ಈ ನೇಮಕಾತಿಗಳಿಗೆ ಪ್ರತಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿ, ಪ್ರಸ್ತಾವನೆ ತಿರಸ್ಕೃತಗೊಂಡರೆ ಆಯ್ಕೆಗಳು ಅಸಿಂಧುಗೊಳ್ಳಲಿವೆ. ಆಗ ಬೇರೆ ವ್ಯಕ್ತಿಗಳ ಹೆಸರನ್ನು ಹುದ್ದೆಗಳಿಗೆ ಶಿಫಾರಸು ಮಾಡಬೇಕಾಗುತ್ತದೆ.

ಗುಜರಾತ್ ಮೂಲ ನ್ಯೂಯಾರ್ಕ್​ನ ಕಾಶ್ (ಕಶ್ಯಪ್) ಪಟೇಲ್ ಅವರ ಪೂರ್ವಜರು ಗುಜರಾತ್​ನವರು. ಅವರು 1970ರಲ್ಲಿ ಕೆನಡಾದಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. ‘ನಾವು ಮೂಲತಃ ಗುಜರಾತಿಗಳು’ ಎಂದು ಸ್ವತಃ ಕಶ್ಯಪ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 70ರ ದಶಕದಲ್ಲಿ ಅವರ ಕುಟುಂಬವು ನ್ಯೂಯಾರ್ಕ್​ನ ಕ್ವೀನ್ಸ್​ಗೆ ಸ್ಥಳಾಂತರಗೊಂಡಿತು. ಈ ಪ್ರದೇಶವನ್ನು ‘ಲಿಟಲ್ ಇಂಡಿಯಾ’ ಎಂದೂ ಕರೆಯಲಾಗುತ್ತದೆ. ಕಾಶ್ ಪಟೇಲ್ ಹುಟ್ಟಿ, ಬೆಳೆದದ್ದು ಇಲ್ಲಿಯೇ. ಅವರ ಪಾಲಕರು ಈಗ ನಿವೃತ್ತರಾಗಿದ್ದು, ಆಗಾಗ ಗುಜರಾತ್​ಗೂ ಭೇಟಿ ನೀಡುತ್ತಿರುತ್ತಾರೆ. ನ್ಯೂಯಾರ್ಕ್​ನಲ್ಲಿ ಶಾಲಾ ಶಿಕ್ಷಣ, ವರ್ಜೀನಿಯಾದ ರಿಚ್​ವುಂಡ್​ನಲ್ಲಿರುವ ಕಾಲೇಜು ಪೂರೈಸಿದ ಬಳಿಕ ಕಾಶ್ ಅವರು ಫ್ಲಾರಿಡಾಕ್ಕೆ ತೆರಳಿದರು. ಕಾನೂನು ಪದವಿ ಪಡೆದ ಅವರು ನಾಲ್ಕು ವರ್ಷಗಳ ಕಾಲ ರಾಜ್ಯ ಸರ್ಕಾರದಲ್ಲಿ ಮತ್ತು ನಂತರ ನಾಲ್ಕು ವರ್ಷಗಳ ಕಾಲ ಫೆಡರಲ್ ಸರ್ಕಾರಕ್ಕಾಗಿ ನ್ಯಾಯಾಂಗ ವಿಭಾಗದಲ್ಲಿ ಕೆಲಸ ಮಾಡಿದರು. ಸಾಕಷ್ಟು ವಿಚಾರಣೆ, ಅಂತಾರಾಷ್ಟ್ರೀಯ ತನಿಖೆಗಳನ್ನು ನಡೆಸಿದ ಅನುಭವ ಅವರಿಗಿದೆ. ನ್ಯಾಯಾಂಗ ಇಲಾಖೆಯಲ್ಲಿ ಭಯೋತ್ಪಾದನಾ ನಿಗ್ರಹ ಪ್ರಾಸಿಕ್ಯೂಟರ್ ಆಗಿ ವಾಷಿಂಗ್ಟನ್ ಡಿಸಿಗೆ ತೆರಳಿದರು. ನಂತರ ಅವರು ಪೂರ್ವ ಆಫ್ರಿಕಾ, ಉಗಾಂಡಾ ಮತ್ತು ಕೀನ್ಯಾದ ಪ್ರಕರಣಗಳಲ್ಲೂ ಕೆಲಸ ಮಾಡಿದರು. 2017ರ ನಂತರ ಅವರು ಹೌಸ್ ಇಂಟೆಲಿಜೆನ್ಸ್ ಸಮಿತಿಯಲ್ಲಿ ರಷ್ಯಾ ಸಂಬಂಧಿತ ಪ್ರಕರಣದ ತನಿಖೆ ಮುನ್ನಡೆಸಿದರು. ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಅವರು ಟ್ರಂಪ್ ಆಪ್ತ ವಲಯದಲ್ಲಿ ಗುರುತಿಸಿಕೊಂಡರು.

ಎಫ್​ಬಿಐ ಟಾರ್ಗೆಟ್ ಯಾಕೆ?: ಬೈಡೆನ್ ಅವಧಿಯಲ್ಲಿ ಅಮೆರಿಕದ ತನಿಖಾ ಸಂಸ್ಥೆಗಳ ಬಗ್ಗೆ ಟ್ರಂಪ್ ನಿರಂತರವಾಗಿ ಆರೋಪ ಮಾಡುತ್ತ ಬಂದಿದ್ದರು. ಎರಡು ವರ್ಷಗಳ ಹಿಂದೆ ವರ್ಗೀಕೃತ ದಾಖಲೆಗಳ ಬಹಿರಂಗ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ಎಫ್​ಬಿಐ ಪ್ರಕರಣ ದಾಖಲಿಸಿತ್ತು. ಅವರ ಖಾಸಗಿ ಎಸ್ಟೇಟ್ ಮೇಲೂ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಅವರ ವಿರುದ್ಧ ಲೈಂಗಿಕ ಪ್ರಕರಣ, ನೀಲಿಚಿತ್ರ ತಾರೆಗೆ ಹಣ ನೀಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಆರೋಪ ಕೇಳಿಬಂದಿತ್ತು. ಈ ಪ್ರಕರಣಗಳನ್ನು ಅಮೆರಿಕದ ತನಿಖಾ ಸಂಸ್ಥೆಗಳು ನಿರ್ವಹಿಸಿದ್ದವು.

ಕಾಶ್ ಪಟೇಲ್ ನಿಲುವೇನು?: ಫೆಡರಲ್ ಕಾನೂನಿನ ಉಲ್ಲಂಘನೆ, ಭಯೋತ್ಪಾದಕ ದಾಳಿಗಳು, ವಿದೇಶಿ ಬೇಹುಗಾರಿಕೆ ಮತ್ತು ಇತರ ಬೆದರಿಕೆಗಳಿಂದ ದೇಶವನ್ನು ರಕ್ಷಿಸಲು ಕಠಿಣ ನಿಯಮ ಜಾರಿ ಮತ್ತು ತನಿಖಾ ಸಂಸ್ಥೆಗಳಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ ಪಟೇಲ್ ಈ ಮೊದಲು ಹೇಳಿದ್ದರು. ಆಡಳಿತದಲ್ಲಿ ಏಜೆನ್ಸಿಗಳ ಹಸ್ತಕ್ಷೇಪ ಕಡಿಮೆ ಮಾಡುವುದು, ಹೆಚ್ಚುವರಿ ಸಂಪನ್ಮೂಲ ಲಭಿಸುವಂತೆ ನೋಡಿಕೊಳ್ಳುವುದು ತಮ್ಮ ಉದ್ದೇಶವಾಗಿದೆ. ವಾಷಿಂಗ್ಟನ್​ನಲ್ಲಿರುವ ಬ್ಯೂರೋದ ಪ್ರಧಾನ ಕಚೇರಿಯನ್ನು ಮುಚ್ಚಿ, ವಸ್ತುಸಂಗ್ರಹಾಲಯ ಮಾಡುವುದಾಗಿ ಅವರು ಅವರು ಹೇಳಿಕೆ ನೀಡಿದ್ದರು.

ಟ್ರಂಪ್ ಆಡಳಿತದಲ್ಲಿ ಭಾರತೀಯ ಮೂಲದವರು

  • ಜಯ್ ಭಟ್ಟಾಚಾರ್ಯ - ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
  • ವಿವೇಕ್ ರಾಮಸ್ವಾಮಿ - ಸರ್ಕಾರಿ ದಕ್ಷತಾ ಇಲಾಖೆ ಉಸ್ತುವಾರಿ
  •  ಕಾಶ್ ಪಟೇಲ್ - ಎಫ್​ಬಿಐ ಮುಖ್ಯಸ್ಥ
  • ಉಷಾ ವೇನ್ಸ್ - ಉಪಾಧ್ಯಕ್ಷ ಡಿ. ವೇನ್ಸ್ ಪತ್ನಿ

ನನ್ನ ಮೊದಲ ಅವಧಿಯಲ್ಲಿ ಕಾಶ್ ಅವರು ರಕ್ಷಣಾ ಇಲಾಖೆ ಸಮಿತಿ ಮುಖ್ಯಸ್ಥರಾಗಿ, ರಾಷ್ಟ್ರೀಯ ಗುಪ್ತಚರ ಉಪ ನಿರ್ದೇಶಕರಾಗಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಭಯೋತ್ಪಾದನೆ ನಿಗ್ರಹದ ಹಿರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ತೀರ್ಪಗಾರರಾಗಿ ಅವರು ಕೆಲಸ ಮಾಡಿದ್ದಾರೆ. ಎಫ್​ಬಿಐಗೆ ನಿಷ್ಠೆ, ಶೌರ್ಯ ಮತ್ತು ಸಮಗ್ರತೆಯನ್ನು ಮರಳಿ ತರಲು ಕಾಶ್ ಕೆಲಸ ಮಾಡಲಿದ್ದಾರೆ.

| ಡೊನಾಲ್ಡ್ ಟ್ರಂಪ್ ಅಮೆರಿಕದ ನಿಯೋಜಿತ ಅಧ್ಯಕ್ಷ