ನ್ಯೂಸ್

ಮಂದಿರಕ್ಕೆ ಕರುನಾಡ ಶಿಲೆಗಳೇ ಬುನಾದಿ; ಪರೀಕ್ಷೆಗೊಳಪಡಿಸಿ ಸಾಗಣೆ

ರಾಘವ ಶರ್ಮ ನಿಡ್ಲೆ ಅಯೋಧ್ಯೆ
ಅಯೋಧ್ಯೆ ಶ್ರೀ ರಾಮಮಂದಿರದ ಗರ್ಭಗುಡಿಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಬಾಲರಾಮ ಪ್ರತಿಷ್ಠಾಪನೆಗೊಂಡ ಸಂಭ್ರಮ ಒಂದೆಡೆಯಾದರೆ, ಅದಕ್ಕೆ ಬಳಕೆಯಾದ ಕಲ್ಲು ಕರ್ನಾಟಕದ ಎಚ್.ಡಿ.ಕೋಟೆಯದ್ದು ಎನ್ನುವುದು ಮತ್ತೊಂದು ಹೆಮ್ಮೆಯ ವಿಷಯ. ಜತೆಗೆ, ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಅವರೂ ಕನ್ನಡಿಗರಾಗಿದ್ದು, ಅಕ್ಷರಶಃ ಹನುಮಂತನ ರೀತಿಯಲ್ಲಿ ಭಗವಾನ್ ಶ್ರೀರಾಮನ ಮಂದಿರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಭ್ರಮ ಇಮ್ಮಡಿಸುವ ವಿಚಾರವೆಂದರೆ ಮಂದಿರ ಅಡಿಪಾಯಕ್ಕೆ ಕರ್ನಾಟಕದ ಕಲ್ಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗಿರುವುದು.

ಬಿಗಿಯಾದ ಅಡಿಪಾಯ: ಗರ್ಭಗುಡಿ ನಿರ್ವಣಗೊಂಡಿರುವ ಮುಖ್ಯ ಭಾಗದಲ್ಲಿ 40 ಅಡಿ ಆಳ ಅಗೆದು ಬಿಗಿಯಾದ ಅಡಿಪಾಯ ನಿರ್ವಿುಸಲಾಗಿದೆ. 40 ಅಡಿ ಆಳಕ್ಕೆ 3 ಮೀಟರ್ ಜಲ್ಲಿ, ಮರಳು ಮತ್ತು ಸಿಮೆಂಟ್ ಸೇರಿದ ವೆಟ್ ಮಿಕ್ಸ್ ಹಾಕಿ, ಅದನ್ನು 2 ಮೀಟರ್​ಗೆ ಕಂಪ್ರೆಸ್ ಮಾಡಲಾಗಿದೆ. ಈ ರೀತಿಯ 48 ಪದರಗಳನ್ನು ಮಾಡುವ ಮೂಲಕ ಬಲಿಷ್ಠವಾದ, ಬಿಗಿಯಾದ ಅಡಿಪಾಯ ಹಾಕಲಾಗಿದೆ. ಇದಲ್ಲದೆ, ಈ ಪದರಗಳ ಮೇಲೆ 5 ಅಡಿ ಮತ್ತೆ ಕಾಂಕ್ರೀಟ್ ಹಾಕಲಾಗಿದೆ. ಇದನ್ನು ಕೃತಕ ಕಲ್ಲಿನ ಅಡಿಪಾಯ ಎಂದೇ ಕರೆಯಲಾಗಿದೆ. ಇದೇ ಕಾರಣಕ್ಕೆ 1000 ವರ್ಷಗಳಾದರೂ ಮಂದಿರಕ್ಕೆ ಏನೂ ಆಗದು ಮತ್ತು ಭೂಕಂಪನವನ್ನೂ ತಡೆಯುವ ಶಕ್ತಿ ಹೊಂದಿದೆ ಎಂದು ಇಲ್ಲಿ ಕೆಲಸ ಮಾಡುತ್ತಿರುವ ಶಿಲಾತಜ್ಞರು ಮಾಹಿತಿ ನೀಡಿದ್ದಾರೆ.

ರೈಲಿನಲ್ಲಿ ಸಾಗಣೆ: ಕರ್ನಾಟಕದಿಂದ ಒಟ್ಟು 17,000 ಕಲ್ಲುಗಳು ಅಯೋಧ್ಯೆಗೆ ಬಂದಿದ್ದು, ಬಹುತೇಕವು ಮಂದಿರದ ಅಡಿಪಾಯ ಸೇರಿವೆ. ಈ ಕಲ್ಲುಗಳನ್ನು ಆರಂಭದಲ್ಲಿ ಬೃಹತ್ ಗಾತ್ರದ ಟ್ರಕ್​ಗಳಲ್ಲಿ ಅಯೋಧ್ಯೆಗೆ ಸಾಗಿಸಲಾಯಿತು. ಆದರೆ, ಇದು ಸಾಕಷ್ಟು ಸಮಯ ತೆಗೆದುಕೊಂಡಿದ್ದರಿಂದ ಅಯೋಧ್ಯಾ ರಾಮಮಂದಿರ ದೇಗುಲ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ನೇರವಾಗಿ ಪ್ರಧಾನಿ ಕಚೇರಿಯೊಂದಿಗೆ ಮಾತನಾಡಿ ರೈಲಿನ ಮೂಲಕ ಕಲ್ಲುಗಳನ್ನು ಸಾಗಿಸಲು ವ್ಯವಸ್ಥೆ ಮಾಡಿದರು. ನೃಪೇಂದ್ರ ಮಿಶ್ರಾ ಮತ್ತು ಎಲ್ ಆಂಡ್ ಟಿ ಕಂಪನಿಯವರು ಕಂಟೇನರ್ ಕಾರ್ಪೆರೇಷನ್ ಆಫ್ ಇಂಡಿಯಾದೊಂದಿಗೂ ಮಾತನಾಡಿ ಆದ್ಯತೆಯ ಮೇರೆಗೆ ರೈಲುಗಳಲ್ಲಿ ಕಲ್ಲುಗಳು ಅಯೋಧ್ಯೆ ತಲುಪುವಂತೆ ನೋಡಿಕೊಂಡರು.

ಮೇಲ್ಬಾಗಕ್ಕೆ ಗುಲಾಬಿ ಕಲ್ಲು: ಮಂದಿರ ಮೇಲ್ಭಾಗಕ್ಕೆ ಹಾಗೂ ಇತರ ಭಾಗಗಳಿಗೆ ರಾಜಸ್ಥಾನದ ಗುಲಾಬಿ ಬಣ್ಣದ ಕಲ್ಲುಗಳನ್ನು ಬಳಸಲಾಗಿದೆ. 7.5 ಲಕ್ಷ ಘನ ಅಡಿಯಷ್ಟು ಈ ಕಲ್ಲುಗಳನ್ನು ಬಳಸಲಾಗಿದ್ದು, ಇವುಗಳನ್ನು ರಾಜಸ್ಥಾನದ ಭರತ್​ಪುರದ ಭಯಾನಾ ಎಂಬಲ್ಲಿಂದ ತರಲಾಗಿದೆ. ಫ್ಲೋರಿಂಗ್​ಗೆ ಮಧುರೈನ ಶಿವಗೋಲ್ಡ್ ಸಂಸ್ಥೆಯ ಕಲ್ಲುಗಳನ್ನು ತರಲಾಗಿದ್ದು, ಅವು 2.50 ಲಕ್ಷ ಚದರಡಿಯಷ್ಟು ಬಳಕೆಯಾಗಿವೆ.

ಬಿರುಕು ಬಿಟ್ಟ ಕಪು್ಪಶಿಲೆ: ಕರ್ನಾಟಕದ ಕಾರ್ಕಳದ ನೆಲ್ಲಿಕಾರು ಮತ್ತು ನೇಪಾಳದ ಗಂಡಕಿ ನದಿಯಿಂದ ತಂದ ಸಾಲಿಗ್ರಾಮ ಶಿಲೆಗಳಲ್ಲಿ ಬಿರುಕು ಮೂಡಿದ ಕಾರಣ ಅವುಗಳನ್ನು ಬಾಲರಾಮನ ಕೆತ್ತನೆಗೆ ಬಳಸಲಾಗಿಲ್ಲ. ಹೀಗಾಗಿ, ಶಿಲ್ಪಿಗಳಾದ ಅರುಣ್ ಯೋಗಿರಾಜ್ ಮತ್ತು ಗಣೇಶ್ ಭಟ್ ಎಚ್.ಡಿ. ಕೋಟೆಯ ಕಪ್ಪುಶಿಲೆಯಲ್ಲಿ ಮೂರ್ತಿಯನ್ನು ಕೆತ್ತಿದ್ದಾರೆ. ಎಚ್​ಡಿ ಕೋಟೆಯ ಬಂಡೆ ಭೂಮಿಯೊಳಗಿದ್ದುದರಿಂದ ಅವು ಬಿಗಿಯಾಗಿ, ಗಟ್ಟಿಯಾಗಿವೆ. ಆದರೆ, ಕಾರ್ಕಳ ಮತ್ತು ನೇಪಾಳದ ಸಾಲಿಗ್ರಾಮ ಶಿಲೆಗಳು ಭೂಮಿಯ ಮೇಲಿದ್ದಂಥವು. ಹೀಗಾಗಿ ಅವುಗಳನ್ನು ಕೆತ್ತುವಾಗ ಕಲ್ಲಿನೊಳಗೆ ಬಿರುಕುಗಳಿರುವುದು ಕಂಡುಬಂತು ಎಂದು ಅಯೋಧ್ಯೆಯಲ್ಲಿದ್ದ ಶಿಲಾತಜ್ಞರು ಮಾಹಿತಿ ನೀಡಿದ್ದಾರೆ.

ನಿರ್ವಣದ ಸವಾಲು: 2020ರಲ್ಲಿ ಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ಲಾರ್ಸೆನ್ ಆಂಡ್ ಟೂಬ್ರೊ (ಎಲ್ ಆಂಡ್ ಟಿ) ಕಂಪನಿಗೆ ನೀಡಿದ್ದಾಗ 3 ವರ್ಷಗಳಲ್ಲಿ ಪೂರ್ಣಗೊಳಿಸಬಹುದು ಎಂಬ ಅಭಿಪ್ರಾಯ ನೀಡಿದ್ದರು. ಆದರೆ, ಜನ್ಮಸ್ಥಾನ ವೀಕ್ಷಣೆ ಹಾಗೂ ಪರಿಶೀಲನೆ ಬಳಿಕ ಇಲ್ಲಿ ವಿಪರೀತ ಧೂಳು, ಮರಳು ಇದ್ದುದರಿಂದ ಕಂಪನಿಯವರು ಅಡಿಪಾಯ ಗಟ್ಟಿ ಮಾಡುವ ಪ್ರಕ್ರಿಯೆಗೇ ಸಾಕಷ್ಟು ಸಮಯ ಬೇಕು ಎಂದು ತಿಳಿಸಿದರು. ಇದಕ್ಕಾಗಿ ಮಂದಿರ ನಿರ್ವಣದ ಜಾಗದಲ್ಲಿ ದೊಡ್ದ ಹೊಂಡ ಅಗೆದು, ಅಡಿಪಾಯ ಗಟ್ಟಿಗೊಳಿಸಲು ಮುಂದಾದರು. ಮೊದಲ ಒಂದು ವರ್ಷ ಅಡಿಪಾಯ ಬಿಗಿಗೊಳಿಸುವುದಕ್ಕೇ ಬೇಕಾಯಿತು. ಹೀಗಾಗಿ, ಎರಡೂವರೆ ವರ್ಷದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಇದು ಪರಿಪೂರ್ಣ ಮಂದಿರವಾಗಲು ಕನಿಷ್ಠ ಇನ್ನೆರಡು ವರ್ಷ ಬೇಕು ಎನ್ನುತ್ತಾರೆ ರಾಮಮಂದಿರ ಟ್ರಸ್ಟ್​ನ ಸದಸ್ಯರಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ.

ಪ್ರತಿ ಕಲ್ಲು 2.6 ಟನ್: ಮಂದಿರ ಅಡಿಪಾಯಕ್ಕೆ ಕರ್ನಾಟಕದ ಗ್ರೇ ಗ್ರಾನೈಟ್ (ಬೂದುಬಣ್ಣ) ಕಲ್ಲುಗಳನ್ನು ಬಳಸಲಾಗಿದೆ. 5.25 ಲಕ್ಷ ಘನ ಅಡಿಗಳಷ್ಟು ಕಲ್ಲುಗಳನ್ನು ಇದಕ್ಕಾಗಿ ಬಳಸಲಾಗಿದ್ದು, ಪ್ರತಿ ಕಲ್ಲು ಅಂದಾಜು 2.6 ಟನ್ ತೂಕವಿದೆ. ಅಂದರೆ 3.99 ಕೋಟಿ ಕೆಜಿ ತೂಕದ ಕಲ್ಲುಗಳು ಬರೀ ಅಡಿಪಾಯಕ್ಕೆ ಬಳಕೆಯಾಗಿವೆ. ಈ ಕಲ್ಲುಗಳನ್ನು ಕರ್ನಾಟಕದ ಹನುಮಾನ್ ಗ್ರಾನೈಟ್, ಧನರಾಜ್ ಆರ್ ಗ್ರಾನೈಟ್ ಮತ್ತು ಅಗ್ರಸೇನ ಪ್ರೖೆಮ್ ತಮಿಳುನಾಡಿನ ಬಾಲಾಜಿ ಇಂಡಸ್ಟ್ರಿಯವರು ಕಳುಹಿಸಿದ್ದಾರೆ.

ಅಡಿಪಾಯಕ್ಕೆ ಶೇ.90 ಕಲ್ಲುಗಳು ಕರ್ನಾಟಕದಿಂದಲೇ ಬಂದಿ ರುವುದು ಗಮನಾರ್ಹ. ಈ ಎಲ್ಲ ಕಲ್ಲುಗಳು ಕೋಲಾರದ ಕೆಜಿಎಫ್​ನಲ್ಲಿರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ರಾಕ್ ಮೆಟಾಲಿಕ್ ಟೆಸ್ಟ್ ಸಂಸ್ಥೆಯಲ್ಲಿ ಪರೀಕ್ಷೆಗೊಳಪಟ್ಟ ನಂತರವೇ ಅಯೋಧ್ಯೆಗೆ ಬಂದಿವೆ. ಕಲ್ಲುಗಳ ಗುಣಮಟ್ಟ ಮತ್ತು ಅವು ಬಿರುಕು ಬಿಡುವ ಸಾಧ್ಯತೆ ಇದೆಯೇ ಇಲ್ಲವೇ ಎಂಬೆಲ್ಲ ಪರೀಕ್ಷೆಗಳನ್ನು ಈ ಸಂಸ್ಥೆಯಲ್ಲಿ ನಡೆಸಲಾಗಿದೆ. ಕಲ್ಲುಗಳ ಮೇಲೆ ಸುತ್ತಿಗೆಯಲ್ಲಿ ಹೊಡೆಯುವಾಗ ಅದು ಉನ್ನತ ತಂತ್ರಜ್ಞಾನವುಳ್ಳ ಕಂಪ್ಯೂಟರ್​ಗೆ ಸಂಪರ್ಕ ಹೊಂದಿರುತ್ತದೆ. ಬಡಿಯುವುದರಿಂದ ಉಂಟಾಗುವ ಶಬ್ದದಿಂದ ಕಲ್ಲಿನ ಗುಣಮಟ್ಟ ಅಳೆಯಲು ಸಾಧ್ಯ ಎಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕರ್ನಾಟಕ ಗ್ರಾನೈಟ್ ಕಂಪನಿಯೊಂದರ ಮುಖ್ಯಸ್ಥರು ‘ವಿಜಯವಾಣಿ’ಗೆ ಮಾಹಿತಿ ನೀಡಿದರು.