ನ್ಯೂಸ್

ರಾಜ್ಯದಲ್ಲಿ CBI ಪವರ್​ ಕಟ್​ ಮಾಡಿದ ಕಾಂಗ್ರೆಸ್​ ಸರ್ಕಾರ; Not because of MUDA ಎಂದ ಸಚಿವರು

ಬೆಂಗಳೂರು: ಮುಡಾ (MUDA) ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ (CM Siddaramaiah) ದಿನ ಕಳೆದಂತೆ ಒಂದಿಲ್ಲೊಂದು ಹೊಸ ಸಂಕಷ್ಟಗಳು ಎದುರಾಗುತ್ತಿದ್ದು, ಅವರ ರಾಜೀನಾಮೆಗೆ ಬಿಜೆಪಿ-ಜೆಡಿಎಸ್ (BJP-JDS)​ ಪಟ್ಟು ಹಿಡಿದಿದೆ. ಇತ್ತ ಸಿಎಂ ಸಿದ್ದರಾಮಯ್ಯಗೆ ರಾಜ್ಯ ಕಾಂಗ್ರೆಸ್​ ಸರ್ಕಾರದ ಸಚಿವರು ಹಾಗೂ ಶಾಸಕರು ಬೆನ್ನೆಲುಬಾಗಿ ನಿಂತಿದ್ದು, ಹೈಕಮಾಂಡ್​ ಕೂಡ ಅಭಯ ತೋರಿದೆ. ಇದೀಗ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿರ್ಧಾರ ಒಂದನ್ನು ಕೈಗೊಂಡಿದ್ದು, ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಮತ್ತಷ್ಟು ಸದ್ದು ಮಾಡುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಲಾಗಿರುವ ಮುಕ್ತ ಒಪ್ಪಿಗೆಯನ್ನು ಹಿಂಪಡೆಯುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇಂದು (ಸೆಪ್ಟೆಂಬರ್​ 26) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಎಚ್​.ಕೆ. ಪಾಟೀಲ್​, ಕ್ರಿಮಿನಲ್ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಒಪ್ಪಿಗೆ ನೀಡಲು ಅನುವು ಮಾಡಿಕೊಡುವ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ, 1946 ರ ಅಡಿಯಲ್ಲಿನ ಅಧಿಸೂಚನೆಯನ್ನು ಹಿಂಪಾಡೆಯಲಾಗಿದೆ. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (DSPE) ಕಾಯ್ದೆ, 1946 ರ ಸೆಕ್ಷನ್ 6 ರ ಪ್ರಕಾರ, ಕೇಂದ್ರೀಯ ತನಿಖಾ ದಳ (CBI) ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ತನಿಖೆಗಳನ್ನು ನಡೆಸಲು ಆಯಾ ರಾಜ್ಯ ಸರ್ಕಾರಗಳಿಂದ ಒಪ್ಪಿಗೆ ಪಡೆಯಬೇಕಾಗಿದೆ.

ಸಿಬಿಐ ಅಥವಾ ಕೇಂದ್ರ ಸರಕಾರ ತಮ್ಮ ಸಾಧನಗಳನ್ನು ಬಳಸುವಾಗ ಅವುಗಳನ್ನು ವಿವೇಚನೆಯಿಂದ ಬಳಸುತ್ತಿಲ್ಲ. ನಾವು ಸಿಬಿಐಗೆ ವಹಿಸಿದ್ದ ಎಲ್ಲಾ ಪ್ರಕರಣಗಳಲ್ಲಿ ಅವರು ಚಾರ್ಜ್ ಶೀಟ್ ಸಲ್ಲಿಸಿಲ್ಲ, ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಯು ತಪ್ಪು ದಾರಿ ಹಿಡಿಯುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಸೂಚನೆ ವಾಪಸ್ ಪಡೆದುಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಮುಡಾ (MUDA) ಪ್ರಕರಣಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ. ಸಿಎಂ ಮೇಲೆ ಲಕಾಯುಕ್ತ ತನಿಖೆಗೆ ನ್ಯಾಯಾಲಯದ ಆದೇಶವಿದೆ. ಈ ನಿರ್ಧಾರದಲ್ಲಿ ಅಂತಹ ಪ್ರಶ್ನೆಯೇ ಇಲ್ಲ  ಎಂದು ಕಾನೂನು ಸಚಿವ ಎಚ್​.ಕೆ. ಪಾಟೀಲ್​ ಕ್ಯಾಬಿನೆಟ್​ ಮೀಟಿಂಗ್​ ಬಳಿಕ ತಿಳಿಸಿದ್ದಾರೆ.