ನ್ಯೂಸ್

ಕರ್ನಾಟಕದಿಂದ ಕಾಶಿ ಯಾತ್ರೆ: ಇದು ನಾಲ್ಕನೇ ಟ್ರಿಪ್, 8 ದಿನದ ರೈಲು ಪ್ರಯಾಣದ ಮಾಹಿತಿ ಇಲ್ಲಿದೆ ನೋಡಿ…

ಬೆಂಗಳೂರು: ಮುಜರಾಯಿ ಇಲಾಖೆಯಿಂದ ಕರ್ನಾಟಕ ಭಾರತ್‌ ಗೌರವ್‌ ಕಾಶಿಯಾತ್ರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಇಂದು ಯಶವಂತಪುರ ರೈಲ್ವೆ ನಿಲ್ದಾಣದಿಂದ ಕರ್ನಾಟಕ ಭಾರತ್‌ ಗೌರವ್‌ ಕಾಶಿಯಾತ್ರೆಗೆ ರೈಲು ಹೊರಟಿದೆ. ಒಟ್ಟು 400 ಯಾತ್ರಿಗಳು ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ದರ್ಶನ ಮಾಡಲಿದ್ದಾರೆ. ಸುಮಾರು 8 ದಿನ ಕಾಶಿ ಪ್ರವಾಸ ಏರ್ಪಡಿಸಲಾಗಿದ್ದು, ಒಬ್ಬರಿಗೆ 20 ಸಾವಿರ ದರ ನಿಗದಿಪಡಿಸಲಾಗಿದೆ. ಇದರಲ್ಲಿ ಸಬ್ಸಿಡಿ 5 ಸಾವಿರ ಸರ್ಕಾರದಿಂದ ಸಿಗಲಿದೆ. ಆದ್ದರಿಂದ ಒಬ್ಬರಿಗೆ 15 ಸಾವಿರ ರೂ.ಆಗಲಿದ್ದು, ಊಟ, ವಸತಿ ವ್ಯವಸ್ಥೆ ಇರಲಿದೆ. ಟ್ರೈನ್ ಕೆಪಾಸಿಟಿ 700 ಸೀಟ್. ಈ ಪೈಕಿ 404 ಪ್ರಯಾಣಿಕರು ಕಾಶಿ ಯಾತ್ರೆಗೆ ಬುಕ್ಕಿಂಗ್ ಮಾಡಿದ್ದಾರೆ.

ಕಾಶಿಯಾತ್ರೆಯ ವಿವರ
ಒಟ್ಟು 8 ದಿನಗಳ ಪ್ರವಾಸದ ವ್ಯವಸ್ಥೆ ಮಾಡಲಾಗಿದ್ದು, ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತಲುಪೋಕೆ ಎರಡು ದಿನ ಬೇಕಾಗುತ್ತದೆ. ವಾರಣಾಸಿಗೆ ರೀಚ್ ಆದ ಬಳಿಕ ಗಂಗಾಸ್ನಾನ, ತುಳಸಿ ಮಂದಿರ ದರ್ಶನ, ಶ್ರೀ ಹನುಮಾನ್ ದರ್ಶನ, ಕಾಶಿ ವಿಶ್ವನಾಥ ದರ್ಶನವಿರಲಿದ್ದು, ಒಂದು ದಿನ ಕಾಶಿಯಲ್ಲಿ ತಂಗುವ ವ್ಯವಸ್ಥೆ ಮಾಡಲಾಗುತ್ತದೆ. ಐದನೇ ದಿನ ವಾರಣಾಸಿಯಿಂದ ಅಯೋಧ್ಯೆಗೆ ಪ್ರಯಾಣವಿರಲಿದೆ.

ಶ್ರೀರಾಮಭೂಮಿ ದರ್ಶನ
ಅಯೋಧ್ಯೆಯಲ್ಲಿ ಶ್ರೀರಾಮಭೂಮಿ ದರ್ಶನ ಮಾಡಿ, ಸಂಜೆ ಸರಾಯು ಆರತಿ ವೀಕ್ಷಣೆ ಇರಲಿದೆ. ಸಂಜೆಯ ಬಳಿಕ ಪ್ರಯಾಗ್ ರಾಜ್ ಗೆ ಪ್ರಯಾಣ. 6 ನೇ ದಿನ ರೈಲು ಪ್ರಯಾಗ್ ರಾಜ್ ತಲುಪಲಿದೆ. 6 ನೇ ದಿನ ಪ್ರಯಾಗ್ ರಾಜ್ ನಲ್ಲಿ ತ್ರಿವೇಣಿ ಸಂಗಮ ಸ್ನಾನ, ಶ್ರೀ ಹನುಮಾನ್ ಮಂದಿರ ದರ್ಶನವಿರಲಿದೆ. ಅದೇ ದಿನ ಪ್ರಯಾಗ್ ರಾಜ್ ನಿಂದ, ರೈಲು ಬೆಂಗಳೂರಿಗೆ ಬರಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಮುಂಗಡ ನೋಂದಣಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ಯಶವಂತಪುರ, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಭಾಗಗಳಲ್ಲಿ ನಿಲ್ದಾಣದ ವ್ಯವಸ್ಥೆಯಿರಲಿದೆ.

ಇಬ್ಬರು ವೈದ್ಯರು
ಈ ಕುರಿತು ಹೇಳಿಕೆ ನೀಡಿರುವ ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಇದು ರಾಜ್ಯ ಸರ್ಕಾರದ ಕಾಶಿಯಾತ್ರೆ. ಈ ಹಿಂದೆ ಮೂರು ಟ್ರಿಪ್ ಆಗಿತ್ತು. ಇದು ನಾಲ್ಕನೇ ಟ್ರಿಪ್. ಈ ಬೋಗಿ ರಾಜ್ಯ ಸರ್ಕಾರದ್ದು. ರಾಜ್ಯ ಸರ್ಕಾರವೇ ಹಣ ಕೊಟ್ಟು ಮಾಡಿಸಿರುವ ಬೋಗಿ. ಬೇರೆ ಭಾಗಗಳಿಗೂ ಈ ಬೋಗಿ ಬಳಕೆ ಮಾಡುತ್ತೇವೆ. ಊಟದ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳಾಗಿವೆ. ಇದರಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಇರುತ್ತಾರೆ. ಒಟ್ಟು 8 ದಿನ ಪ್ರಯಾಣವಿರುತ್ತದೆ. 2ಎರಡೂವರೆ ದಿನಕ್ಕೆ ಅಲ್ಲಿ ರೀಚ್ ಆಗ್ತಾರೆ. ಕೊನೆಯ ದಿನ ಪ್ರಯಾಗ್ ರಾಜ್ ನಲ್ಲಿರುತ್ತಾರೆ15 ಸಾವಿರ ಟಿಕೆಟ್ ದರ ನಿಗದಿ ಮಾಡಲಾಗಿದ್ದು, 5 ಸಾವಿರ ಸಬ್ಸಿಡಿ ಸರ್ಕಾರದಿಂದ ನೀಡಲಾಗುತ್ತದೆ. ಆಗಸ್ಟ್ 15 ಕ್ಕೆ ಮತ್ತೆ 5ನೇ ಕಾಶಿಯಾತ್ರೆ ಆರಂಭವಾಗಲಿದೆ ಎಂದರು.