ನ್ಯೂಸ್

ಸ್ಕೇಟಿಂಗ್​ನಲ್ಲಿ ಅದ್ಭುತ ಸಾಧನೆ ಮಾಡಿದ ಹುಬ್ಬಳ್ಳಿಯ ಬಾಲಕಿಯರು!

ಬೆಂಗಳೂರು: ಕರ್ನಾಟಕ ರೋಲರ್ ಡರ್ಬಿ ಸ್ಕೇಟರ್ಸ್ ಮತ್ತು ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯು ಬೆಂಗಳೂರಲ್ಲಿ ಆಯೋಜಿಸಿದ್ದ '60ನೇ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್-2022'ರಲ್ಲಿ ಹುಬ್ಬಳಿಯ ತ್ರಿಷಾ ಜಡಾಲ ಮತ್ತು ಸಾಕ್ಷಿ ಕಡ್ಡಿ ಅವರು ಕಂಚಿನ ಪದಕ ಗೆದ್ದಿದ್ದಾರೆ.

ಸಾಧನೆಯ ಬೆನ್ನತ್ತಿದ ತ್ರಿಷಾ: ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ ತ್ರಿಷಾ ಜಡಾಲ ಸ್ಕೇಟಿಂಗ್​ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕಳೆದ 5 ವರ್ಷದಲ್ಲಿ ಬರೋಬ್ಬರಿ 45 ಪದಕಗಳು ತ್ರಿಷಾಳ ಮುಡಿಗೇರಿವೆ. ಇದರಲ್ಲಿ 38 ಚಿನ್ನದ ಪದಕ, 9 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕ. ಇವರ ಸಾಧನೆಗೆ ಪಾಲಕರು, ಶಿಕ್ಷಕರಿಂದ ಪ್ರೋತ್ಸಾಹ ಸಿಗುತ್ತಿದ್ದು, ರಾಷ್ಟ್ರಮಟ್ಟದ ಸ್ಕೇಟಿಂಗ್​ ಸ್ಪರ್ಧೆಯಲ್ಲೂ ಮಿಂಚಿದ್ದಾರೆ. ವೈಯಕ್ತಿಕ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ 8 ಬಾರಿ ಗೆಲುವಿನ ಮಾಲೆಗೆ ಕೊರಳೊಡ್ಡಿದ್ದಾರೆ. ಸ್ಕೇಟಿಂಗ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದ ಧಾರವಾಡ ಜಿಲ್ಲೆಯ ಮೊದಲ ಬಾಲಕಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್ ಆಯೋಜಿಸಿದ್ದ 70 ಕಿ.ಮೀ. ದೂರ ನಾನ್‌ಸ್ಟಾಪ್ ಸ್ಕೇಟಿಂಗ್ ರ್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದ ತ್ರಿಷಾ, ಹುಬ್ಬಳ್ಳಿಯಿಂದ ನರಗುಂದಕ್ಕೆ 60 ಕಿ.ಮೀ. ದೂರ ಸ್ಕೇಟಿಂಗ್​ ಮೂಲಕ ರ್ಯಾಲಿ (ಕಳಸಾ ಬಂಡೂರಿ ಯೋಜನೆ ಬೆಂಬಲಿಸಲು). ಅಂತರಾಷ್ಟ್ರೀಯ ಯೋಗ ದಿನದಂದು ಹುಬ್ಬಳ್ಳಿಯಿಂದ ಧಾರವಾರಡಕ್ಕೆ 28 ​ಕಿ.ಮೀ.​ ರ್ಯಾಲಿ. ಸಾಮಾಜಿಕ ಉದ್ದೇಶಕ್ಕಾಗಿ 6 ​​ಗಂಟೆಗಳ ತಡೆರಹಿತ ಸ್ಕೇಟಿಂಗ್ (ಹೆಣ್ಣು ಮಗುವನ್ನು ಉಳಿಸಿ ಅಭಿಯಾನ), ಗಿನ್ನೆಸ್ ವರ್ಲ್ಡ್ ವಿಶ್ವ ದಾಖಲೆಗಾಗಿ ನಡೆದ 'ಸೈಕ್ಲೋತ್ಸವ-2019'ರಲ್ಲಿ ಭಾಗಿ... ಹೀಗೆ ಅನೇಕ ಮ್ಯಾರಥಾನ್ ಈವೆಂಟ್‌ಗಳಲ್ಲಿ ಭಾಗವಹಿಸಿದ್ದಾರೆ.

2021ರ ನವೆಂಬರ್ 24 ಮತ್ತು 25ರಂದು ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ 37ನೇ ರೋಲರ್ ಸ್ಕೇಟಿಂಗ್ ಹಾಕಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ತ್ರಿಷಾ, 2021ರ ಡಿಸೆಂಬರ್ 11ರಿಂದ 22ರವರೆಗೆ ಮೊಹಾಲಿಯಲ್ಲಿ ನಡೆದ 59ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್​ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನ ಪ್ರತಿನಿಧಿಸಿದ್ದು ಹೆಮ್ಮೆಯ ಸಂಗತಿ. 2022 ಮೇ ತಿಂಗಲ್ಲಿ ಕಾರವಾರದಿಂದ ಬೆಂಗಳೂರಿಗೆ 610 ಕಿ.ಮೀ. ದೂರ ಸ್ಕೇಟಿಂಗ್ ರ್ಯಾಲಿಯಲ್ಲಿ ತ್ರಿಷಾ ಪಾಳ್ಗೊಂಡಿದ್ದರು. ನಿತ್ಯ 30ರಿಂದ 40 ಕಿ.ಮೀ. ದೂರ ರ್ಯಾಲಿ ನಡೆಸಲಾಗುತ್ತಿತ್ತು.

ಹೀಗೆ ಇಕೆಯ ಸಾಧನೆಯ ಪಟ್ಟಿ ಬೆಳೆಯುತ್ತಲೇ ಇದ್ದು, ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ ಹಲವು ಕಾರ್ಯಕ್ರಮಗಳಲ್ಲಿ ಸನ್ಮಾನಿಸಲಾಗಿದೆ. RED FM ಆಯೋಜಿಸಿದ್ದ ಡೆಥೋಲಾನ್ ಕ್ರೀಡಾ ವಾರ್ಷಿಕೋತ್ಸವದಲ್ಲೂ ವಿಶೇಷ ಗೌರವ ಸಲ್ಲಿಸಲಾಗಿದೆ. KLE ದಿ ಬ್ಯಾನ್ಯನ್ ಶಾಲೆಯಲ್ಲಿ ಕ್ರೀಡಾ ದಿನದ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ತ್ರಿಷಾರನ್ನು ಆಹ್ವಾನಿಸಿ ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲಾಗಿದೆ.