ನ್ಯೂಸ್

ರೇಷ್ಮೆ ಮೆರುಗು: ಉತ್ಪಾದನೆಯಲ್ಲಿ ಕರ್ನಾಟಕವೇ ಮುಂದು

ರಾಮನಗರ: ರೇಷ್ಮೆ ಸೀರೆ ನಾರಿಯರ ಅಚ್ಚುಮೆಚ್ಚಿನ ಪೋಷಾಕು. ರೇಷ್ಮೆ ವಸ್ತುವಿಲ್ಲದ ಸಮಾರಂಭಗಳನ್ನು ನೋಡಲು ಸಾಧ್ಯವೇ ಇಲ್ಲ ಎನ್ನುವಂತಹ ಅವಿನಾಭಾವ ಸಂಬಂಧ ಬೆಸೆದುಕೊಂಡಿದ್ದು, ಇದು ರಾಜ್ಯದ ರೇಷ್ಮೆಗೆ ಜಾಗತಿಕ ಮನ್ನಣೆ ದೊರಕಿಸಿಕೊಡುವ ಜತೆಗೆ ಉತ್ಪಾದನೆಯಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದೆ.

ಎರಡು ಶತಮಾನಗಳ ಹಿಂದೆ ರಾಜ್ಯದಲ್ಲಿ ಪರಿಚಯಗೊಂಡ ರೇಷ್ಮೆಗೆ ಜಾಗತಿಕ ಮನ್ನಣೆ ದೊರೆತಿದೆ. ಜಾಗತೀಕವಾಗಿ ಚೀನಾ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರೂ ಭಾರತದಲ್ಲಿ ಕರ್ನಾಟಕದ್ದೇ ಸಿಂಹಪಾಲು. ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಶೇಕಡ 40ರಷ್ಟು ಪಾಲು ಕರ್ನಾಟಕದ್ದೇ ಆಗಿದೆ. ದೇಶದಲ್ಲಿ 27 ರಾಜ್ಯಗಳ ಸುಮಾರು 2.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದೆ. ಇದರಲ್ಲಿ ರಾಜ್ಯದಲ್ಲಿಯೇ 1.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತದೆ. ನಂತರದ ಸ್ಥಾನ ಕ್ರಮವಾಗಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಮಹಾರಾಷ್ಟ್ರ ಹೊಂದಿವೆ. ಇನ್ನು ರಾಜ್ಯದಿಂದ ಪ್ರತಿ ವರ್ಷ ಸರಾಸರಿ 11,500 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಉತ್ಪಾದನೆ ಆಗುತ್ತಿದೆ.

ಮಣ್ಣಿನಿಂದ ಸೀರೆವರೆಗೆ

ರೇಷ್ಮೆ ಮಣ್ಣಿನಿಂದ ಚಿನ್ನ ತೆಗೆಯುವ ಒಂದು ಉದ್ಯಮ, ರೈತರು ರೇಷ್ಮೆಯನ್ನು ಬೆಳೆದು ಮಾರಾಟ ಮಾಡಿದರೆ, ನಂತರ ನಡೆಯುವುದು ರೇಷ್ಮೆಗೆ ಚಿನ್ನದ ರೂಪ ಕೊಡುವ ಕಾರ್ಯ. ರೀಲರ್​ಗಳು ಕಚ್ಚಾ ರೇಷ್ಮೆ ತಯಾರಿಸಿದರೆ, ನಂತರ ಇದು ಟ್ವಿಸ್ಟಿಂಗ್ ಮೂಲಕ ನೂಲಿನ ರೂಪದೊಂದಿಗೆ ರೇಷ್ಮೆ ಸೀರೆಗಳಾಗಿ, ಮಗ್ಗಗಳ ಮೂಲಕ ನಾರಿಯರ ಮನಗೆದ್ದಿದೆ. ಇದರ ಜತೆಗೆ, ರೇಷ್ಮೆ ಶಾಲುಗಳು ಬೆಚ್ಚಗಿನ ಅನುಭವ ನೀಡುತ್ತಿವೆ. ರಾಜ್ಯದಲ್ಲಿ ಉತ್ಪಾದನೆಯಾಗುವ ರೇಷ್ಮೆ ಪ್ರಸಿದ್ಧ ಬನಾರಸ್, ಕಾಂಚಿಪುರಂ, ಇಳಕಲ್ ಸೀರೆಗಳ ಉತ್ಪಾದನೆಯಲ್ಲಿಯೂ ಬಳಕೆಯಾಗುತ್ತದೆ. ಇನ್ನು ರೇಷ್ಮೆ ಸೀರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೆಎಸ್​ಐಟಿ, ಗೂಡು ಖರೀದಿಸಿ ರೇಷ್ಮೆ ಸೀರೆ ಉತ್ಪಾದನೆ ಮಾಡಿ, ಮಾರಾಟ ಮಾಡುವವರೆಗೂ ತನ್ನದೇ ಒಡೆತನ ಹೊಂದಿದ್ದು, ಗುಣಮಟ್ಟ ಮತ್ತು ವಿನ್ಯಾಸಗಳಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿ ವಿದೇಶಗಳಲ್ಲಿಯೂ ಮಳಿಗೆ ಹೊಂದಿರುವುದು ಹೆಗ್ಗಳಿಕೆ.

ಹೆಚ್ಚುತ್ತಿದೆ ಪ್ರದೇಶ

ರೇಷ್ಮೆ ಬೆಳೆಗೆ ರಾಜ್ಯ ಅದರಲ್ಲೂ ಹಳೇ ಮೈಸೂರು ಭಾಗದ ವಾತಾವರಣ ಸೂಕ್ತವೆನಿಸಿದೆ. ರಾಜ್ಯದಲ್ಲಿ ರೇಷ್ಮೆ ಉತ್ಪಾದನೆ ಪ್ರದೇಶ ಮೊದಲು ದಕ್ಷಿಣ ಕರ್ನಾಟಕ ಭಾಗದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಾಗಿ ಆಗುತ್ತಿತ್ತು. ಆದರೆ, ಈಗ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ರೇಷ್ಮೆಯನ್ನು ಉತ್ಪಾದಿಸಲಾಗುತ್ತಿದೆ. ಈ ಮೊದಲು ವಾರ್ಷಿಕ ಸುಮಾರು 8-9 ಮೆಟ್ರಿಕ್ ಟನ್ ರೇಷ್ಮೆಯನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತಿತ್ತು. ಇದನ್ನು ಕಡಿಮೆಗೊಳಿಸಿ ದೇಶದಲ್ಲಿಯೇ ಗುಣಮಟ್ಟದ ರೇಷ್ಮೆ ಬೆಳೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಇತ್ತೀಚೆಗೆ ಮಿಶ್ರ ತಳಿ ಬದಲು ಬೈವೋಲ್ಟಿನ್ ರೇಷ್ಮೆ ಬೆಳೆಯಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.

ಕಾಮಧೇನು ಕಲ್ಪವೃಕ್ಷ...

ಸಾಮಾನ್ಯವಾಗಿ ರೇಷ್ಮೆ ಎಂದರೆ ಸೀರೆಗಳ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತದೆ. ಆದರೆ ರೇಷ್ಮೆ ಕಲ್ಪವೃಕ್ಷ, ಕಾಮಧೇನುವಾಗಿ ಬದಲಾಗಿದೆ. ಹಿಪು್ಪನೇರಳೆ ಗಿಡ ಹುಳುಗಳಿಗೆ ಮಾತ್ರವಲ್ಲದೆ ಮನುಷ್ಯರ ಆಹಾರಕ್ರಮವಾಗಿಯೂ ಬಳಕೆ ಮಾಡಬಹುದು ಎನ್ನುವುದು ಸಾಬೀತಾಗಿದೆ. ಮಲ್ಬೆರಿ ಎಲೆಗಳನ್ನು ಚಹಾ ತಯಾರಿಕೆಗೆ ಬಳಸಬಹುದಾಗಿದ್ದರೆ ಮಲ್ಬೆರಿ ಹಣ್ಣುಗಳು, ಬೆರ್ರಿ ಜಾತಿಯ ಇತರ ಹಣ್ಣುಗಳಷ್ಟೇ ಆರೋಗ್ಯದಾಯಕವಾಗಿರುವ ಕಾರಣ ಇವುಗಳನ್ನು ಜಾಮ್ ತಯಾರಿಕೆಯಲ್ಲಿಯೂ ಉಪಯೋಗಿ ಸಲಾಗುತ್ತಿದೆ. ಇದರ ಜತೆಗೆ ರೇಷ್ಮೆ ಪ್ಯೂಪಾ, ಮೀನು ಮತ್ತು ಕೋಳಿ ಆಹಾರವಾಗಿ ಬಳಕೆ ಆಗುತ್ತಿದ್ದರೆ, ಸಂಸ್ಕರಿತ ಪ್ಯೂಪಾ ಆರೋಗ್ಯ ಕ್ಷೇತ್ರದಲ್ಲಿಯೂ ಬಳಕೆ ಆಗುತ್ತಿದೆ. ಇನ್ನು ಜೂಟ್​ನಿಂದಲೇ ನೆಲಹಾಸು, ಕಿಟಕಿಯ ಪರದೆ ತಯಾರಾಗುತ್ತಿದ್ದರೆ, ಚಿಟ್ಟೆ ಕೊರೆದ ಗೂಡುಗಳು ಹಾರಗಳಾಗಿ ದೇಶ-ವಿದೇಶಗಳ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಉದ್ಯೋಗದಾತ ಕ್ಷೇತ್ರ

ರೇಷ್ಮೆ ಕೃಷಿ ಮತ್ತು ಉದ್ಯಮವು ಉದ್ಯೋಗದಾತ ಕ್ಷೇತ್ರವಾಗಿಯೂ ಬದಲಾಗಿದೆ. ರೇಷ್ಮೆ ಕೃಷಿ ಹಾಗೂ ನಂತರ ಕಾರ್ಯಗಳಲ್ಲಿ ರಾಜ್ಯದ ಸುಮಾರು 12 ಲಕ್ಷ ಕುಟುಂಬಗಳು ನೇರವಾಗಿ ಇಲ್ಲವೇ ಪರೋಕ್ಷವಾಗಿ ತೊಡಗಿಸಿಕೊಂಡಿವೆ. ಅದರಲ್ಲೂ ರೇಷ್ಮೆ ಕೃಷಿ ಮತ್ತು ನಂತರದ ಗುಡಿ ಕೈಗಾರಿಕೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗಿದ್ದಾರೆ.