ನ್ಯೂಸ್

ಕಂಟೈನ್​ಮೆಂಟ್​ ಝೋನ್​ನಿಂದಲೇ ಕೇಕೇ ಹಾಕುತ್ತಿದೆ ಕರೊನಾ!

suchetana

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ ಎಂಬ ಸಮಾಧಾನ ಒಂದೆಡೆಯಾದರೆ, ಕಂಟೈನ್​ಮೆಂಟ್​ ಝೋನ್​ನಲ್ಲಿರುವವರ ಸಂಪರ್ಕದಿಂದಾಗಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಇನ್ನೊಂದೆಡೆ ಆತಂಕಕ್ಕೆ ಕಾರಣವಾಗಿದೆ.

ಬೀದರ್​ನಲ್ಲಿರುವ ಕಂಟೈನ್​ಮೆಂಟ್​ ಝೋನ್​ನ ಸೋಂಕಿತರ ಸಂಪರ್ಕಕ್ಕೆ ಬಂದಿರುವ 11 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಅತ್ಯಧಿಕ ಮಂದಿ ಮಕ್ಕಳೇ ಎನ್ನುವುದು ಆತಂಕದ ವಿಷಯವಾಗಿದೆ. ಇದಲ್ಲದೇ, ಕಲಬುರಗಿಯ ಇಬ್ಬರು ಪುರುಷರಲ್ಲಿ ಕಂಟೈನ್​ಮೆಂಟ್​ ಝೋನ್​ನ ಸಂಪರ್ಕದಿಂದಲೇ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು 12 ಗಂಟೆಯವರೆಗಿನ ಅಂಕಿಅಂಶವಿದು.

ಇನ್ನೊಂದೆಡೆ, ಕಳೆದೊಂದು ವಾರದಿಂದ ಗುಜರಾತ್​, ಮಹಾರಾಷ್ಟ್ರ ಮುಂತಾದ ಪ್ರದೇಶಗಳಿಂದ ಬಂದಿರುವ ಪ್ರಯಾಣಿಕರಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಇದರ ಮುಂದುವರೆದಿರುವ ಭಾಗವಾಗಿ ಇದೀಗ ಹಾಸನ ಒಂದರಲ್ಲಿಯೇ ನಾಲ್ಕು ಮಂದಿಗೆ ಸೋಂಕು ತಗುಲಿದೆ. ಇವರೆಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ 26 ವರ್ಷದ ಯುವಕ ಮಹಾರಾಷ್ಟ್ರದ ರತ್ನಗಿರಿಯಿಂದ ಬಂದಿದ್ದು ಈತನಲ್ಲಿಯೂ ಸೋಂಕು ಕಾಣಿಸಿದೆ. ಇದಲ್ಲದೇ ಮುಂಬೈನಿಂದ ಬಂದಿರುವ ವಿಜಯಪುರದ ಇಬ್ಬರು ಯುವಕರಿಗೂ ಸೋಂಕು ಬಾಧಿಸಿದೆ.

ಇದನ್ನು ಹೊರತುಪಡಿಸಿದರೆ, ದಕ್ಷಿಣ ಕನ್ನಡದ 1, ಬೆಂಗಳೂರು ನಗರದ 1, ಉತ್ತರ ಕನ್ನಡ ಜಿಲ್ಲೆಯಲ್ಲಿ 1, ಬಳ್ಳಾರಿಯ 1, ದಾವಣಗೆರೆಯ 2 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಕರೊನಾ ಸೋಂಕಿತರ ಸಂಖ್ಯೆ 951ಕ್ಕೆ ಏರಿದೆ. ಈ ಪೈಕಿ 442 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 32 ಮಂದಿ ಮೃತಪಟ್ಟಿದ್ದಾರೆ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ಇದರ ಸಂಪೂರ್ಣ ವಿವರ ಇಲ್ಲಿದೆ: