ಬೆಂಗಳೂರು: ಕರ್ನಾಟಕ ಬ್ಯಾಂಕ್ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯಡಿ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎಸ್‌ಆರ್‌ಐಟಿ)ಯ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿದೆ.
ಬುಧವಾರ ಕಾಲೇಜಿನ ಆವರಣದಲ್ಲಿ ಕರ್ನಾಟಕ ಬ್ಯಾಂಕ್‌ನ ಉಪ ಪ್ರಧಾನ ಪ್ರಬಂಧಕ ಬಿ. ನಾಗರಾಜು ಉಪಾಧ್ಯಾಯ ಮತ್ತು ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ.ಎಂ.ಆರ್. ಸೀತಾರಾಂ ಅವರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಬ್ಯಾಂಕ್ ಉಪ ಪ್ರಧಾನ ಪ್ರಬಂಧಕ ಬಿ. ನಾಗರಾಜು ಉಪಾಧ್ಯಾಯ, ಸಿಎಸ್‌ಆರ್ ಯೋಜನೆಯಡಿಯಲ್ಲಿ ನಾವು ಸಾಕಷ್ಟು ಸಮಾಜ ಕಲ್ಯಾಣ ಕಾರ್ಯಕ್ರಮಗಳು ಮಾಡಿಕೊಂಡು ಬಂದಿದ್ದೇವೆ. ನಾವು ರಾಮಯ್ಯ ಸಂಸ್ಥೆಯೊಂದಿಗೆ 30 ವರ್ಷಗಳ ಬಾಂಧವ್ಯ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿ ವ್ಯಾಸಂಗ ಮಾಡುವ 56 ಬಡ ವಿದ್ಯಾರ್ಥಿಗಳನ್ನು ಲಾನುಭವಿಗಳಾಗಿ ಆಯ್ಕೆ ಮಾಡಿ ಲ್ಯಾಪ್‌ಟಾಪ್ ನೀಡಿದ್ದೇವೆ ಎಂದರು. ಆರ್ಥಿಕ ದುರ್ಬಲರಿಗೆ ಸಹಾಯವಾಗಬೇಕೆಂಬ ಕಾರಣಕ್ಕೆ ಸಿಇಟಿ ಮೂಲಕ ಸೀಟು ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿದ್ದೇವೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಗೋಕುಲ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ಸೀತಾರಾಂ, ಕಾರ್ಯನಿರ್ವಾಹಕರಾದ ಬಿ.ಎಸ್.ರಾಮಪ್ರಸಾದ್, ಪ್ರಾಂಶುಪಾಲರಾದ ಡಾ. ಎನ್.ವಿ.ಆರ್. ನಾಯ್ಡು, ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶಶಿಧರ ಸಿ.ಕೆ ಮತ್ತಿತರರಿದ್ದರು.
ಕರ್ನಾಟಕ ಬ್ಯಾಂಕ್ ಬಹಳ ಉತ್ತಮ ಕೆಲಸವನ್ನು ಮಾಡಿದೆ. ಇದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ. ಶೈಕ್ಷಣಿಕ ಅವಧಿ ಮುಗಿದ ಬಳಿಕ ಕೂಡ ಅವರು ಇದನ್ನು ಬಳಕೆ ಮಾಡಬಹುದಾಗಿದೆ. ಸಿಎಸ್‌ಆರ್ ನಿಧಿಯನ್ನು ಕಂಪನಿಗಳು ಮೊದಲು ಸರ್ಕಾರಕ್ಕೆ ನೀಡಬೇಕಾಗಿತ್ತು. ಅನಂತರ ಸರ್ಕಾರ ಅದನ್ನು ವಿನಿಯೋಗಿಸುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಕಂಪನಿಗಳಿಗೆ ನೇರವಾಗಿ ನೀಡಲು ಅವಕಾಶ ನೀಡಿದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತಿದೆ ಎಂದು ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ.ಎಂ.ಆರ್. ಸೀತಾರಾಂ ತಿಳಿಸಿದರು.