ಬೆಂಗಳೂರು: ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಇಂದು ನಡೆಯುತ್ತಿರುವ ಕರ್ನಾಟಕ ಬಂದ್ಗೆ ಚಿತ್ರರಂಗವು ಸಹ ಬೆಂಬಲ ನೀಡಿದೆ. ನಟ ಶಿವರಾಜ್ಕುಮಾರ್ ನೇತೃತ್ವದಲ್ಲಿ ಇಂದು ಇಡೀ ಚಿತ್ರರಂಗ ಒಂದೇ ವೇದಿಕೆಯಲ್ಲಿ ಕಾವೇರಿಗಾಗಿ ಪ್ರತಿಭಟನೆ ನಡೆಸಲಿದೆ. ಆದರೆ, ಸ್ಟಾರ್ ನಟರಾದ ಕಿಚ್ಚ ಸುದೀಪ್, ದರ್ಶನ್, ಯಶ್ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.
ಇಂದಿನ ಹೋರಾಟದಲ್ಲಿ ಸ್ಟಾರ್ ನಟರು ಭಾಗವಹಿಸುವುದಿಲ್ಲ. ಅದಕ್ಕೆ ಕಾರಣ ಏನು ಅಂತಾ ನೋಡುವುದಾದರೆ, ನಟ ಸುದೀಪ್ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿದ್ದು, ಅದರ ಶೂಟಿಂಗ್ನಲ್ಲಿ ಕಿಚ್ಚ ಬಿಜಿಯಾಗಿದ್ದಾರೆ.
ನಟ ದರ್ಶನ್ ಅವರ ಪುತ್ರ ವಿನೀಶ್ ಕಾಲಿಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ದರ್ಶನ್ ಮಗನ ಜತೆಗೆ ಆಸ್ಪತ್ರೆಯಲ್ಲಿದ್ದಾರೆ. ಆದ್ದರಿಂದ ಅವರು ಪ್ರತಿಭಟನೆಯಲ್ಲಿ ಭಾಗಿ ಆಗುವ ಸಾಧ್ಯತೆ ಕಡಿಮೆ ಇದೆ. ರಾಕಿಂಗ್ ಸ್ಟಾರ್ ಯಶ್ ಲಂಡನ್ನಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರು ಕೂಡ ಪ್ರತಿಭಟನೆಗೆ ಗೈರಾಗಲಿದ್ದಾರೆ.
ರವಿಚಂದ್ರನ್ ಅವರು ಅಮೆರಿಕ ಪ್ರವಾಸದಲ್ಲಿದ್ದು ಇಂದು ನಡಿಯೋ ಪ್ರತಿಭಟನೆಯಲ್ಲಿ ರವಿಚಂದ್ರನ್ ಬದಲಿಗೆ ಮಕ್ಕಳಾದ ಮನೋರಂಜನ್ ಹಾಗು ವಿಕ್ರಮ್ ಭಾಗಿ ಆಗುವ ಸಾಧ್ಯತೆ ಇದೆ.
ಸುದೀಪ್, ದರ್ಶನ್, ಯಶ್ ಮತ್ತು ರವಿಚಂದ್ರನ್ ಹೊರತುಪಡಿಸಿ, ಶಿವಣ್ಣ , ಧ್ರುವ ಸರ್ಜಾ, ನಿಖಿಲ್, ಕೋಮಲ್, ರವಿಶಂಕರ್ ಹಾಗೂ ಸಾಧು ಕೋಕಿಲ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಬಂದ್ ಆಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ಗಳು ಮುಚ್ಚಿವೆ. ಪ್ರೇಕ್ಷಕರಿಲ್ಲದೆ ಸಿನಿಮಾ ಚಿತ್ರಮಂದಿರಗಳು ಬಣ ಗುಡುತ್ತಿವೆ. ಸಿನಿಮಾ ರಿಲೀಸ್ ದಿನವೇ ಚಿತ್ರ ಪ್ರದರ್ಶನ ರದ್ದಾಗಿದ್ದು, ನಿನ್ನೆ ಬಿಡುಗಡೆಯಾದ ಸಿನಿಮಾಗಳು ಮತ್ತು ಇಂದು ರಿಲೀಸ್ ಆಗಬೇಕಿದ್ದ ಸಿನಿಮಾಗಳಿಗೆ ಅಡ್ಡಿಯಾಗಿದೆ. ಕಾವೇರಿ ನೀರಿಗಾಗಿ ಇಂದು ಒಂದೇ ಸೂರಿನಡಿ 'ಸ್ಯಾಂಡಲ್ವುಡ್' ಹೋರಾಟ ನಡೆಸುತ್ತಿವೆ. ಈ ಹಿನ್ನೆಲೆ ಇಂದು ಯಾವುದೇ ಸಿನಿಮಾ ಶೂಟಿಂಗ್, ಸಿನಿಮಾ ಪ್ರದರ್ಶನ ಹಾಗೂ ಔಟ್ಡೋರ್ ಶೂಟಿಂಗ್ ಇರುವುದಿಲ್ಲ. ಸಂಜೆ 6 ಗಂಟೆಯವರೆಗೂ ಚಿತ್ರರಂಗದ ಎಲ್ಲ ಚಟುವಟಿಕೆಗಳಿಗೆ ತಾತ್ಕಾಲಿಕ ತಡೆ ನೀಡಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲಾಗುತ್ತಿದೆ.
ಶಿವರಾಜ್ ಕುಮಾರ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. 'ಕಾವೇರಿ ಜೀವಜಲ ನಮ್ಮದು' ಎಂದು ಚಿತ್ರರಂಗದ ಘೋಷಣೆ ಇಂದು ಮೊಳಗಲಿದೆ. ಈಗಾಗಲೆ ಹೋರಾಟಕ್ಕೆ ಶಿವಣ್ಣ ಬೆಂಬಲ ಸೂಚಿಸಿದ್ದಾರೆ. 9 ಗಂಟೆಯ ನಂತರ ವಾಣಿಜ್ಯ ಮಂಡಳಿಗೆ ಶಿವಣ್ಣ ಭೇಟಿ ನೀಡಲಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಹಾಗೂ ಹಲವರೊಂದಿಗೆ ಶಿವಣ್ಣ ಮೀಟಿಂಗ್ ಮಾಡಲಿದ್ದಾರೆ. ನಂತರ ಫಿಲ್ಮ್ ಚೇಂಬರ್ನಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ ಮಾಡಲಿದ್ದಾರೆ. ನಂತರ 10 ಗಂಟೆಗೆ ಟೌನ್ ಹಾಲ್ ಬಳಿ ಕಾವೇರಿ ಹೋರಾಟದಲ್ಲಿ ಶಿವಣ್ಣ ಭಾಗಿಯಾಗಲಿದ್ದಾರೆ. ಶಿವಣ್ಣನ ಜತೆ ಮತ್ತಷ್ಟು ನಟ-ನಟಿಯರು ಕಾವೇರಿ ಹೋರಾಟದಲ್ಲಿ ಕೈಜೋಡಿಸಲಿದ್ದಾರೆ.