ನ್ಯೂಸ್

ಇನ್ಫೋಸಿಸ್​​ನಿಂದ 32 ಸಾವಿರ ರೂ.ಕೋಟಿ ತೆರಿಗೆ ಬಾಕಿ; GST ನೋಟಿಸ್​ ಹಿಂಪಡೆದ ರಾಜ್ಯ ಸರ್ಕಾರ

ಬೆಂಗಳೂರು: ಮಹತ್ವದ ಬೆಳವಣಿಗೆ ಒಂದರಲ್ಲಿ ಇನ್ಫೋಸಿಸ್ ಗೆ ನೀಡಲಾಗಿದ್ದ 32 ಸಾವಿರ ಕೋಟಿ ರೂ. ಮೊತ್ತದ ಜಿಎಸ್​ಟಿ ನೋಟಿಸ್​ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಮೊದಲು 2017ರಿಂದ 2022ರವರೆಗೆ ಐದು ವರ್ಷದಲ್ಲಿ ಬರೋಬ್ಬರಿ 32,403.46 ಕೋಟಿ ರೂ ಮೊತ್ತದ ಐಜಿಎಸ್​ಟಿ ಪಾವತಿಸಬೇಕು ಎಂದು ಜಿಎಸ್​ಟಿ ಅಧಿಕಾರಿಗಳು ಇನ್ಫೋಸಿಸ್​ಗೆ ನೋಟಿಸ್​ ಜಾರಿ ಮಾಡಿದ್ದರು.

ರಾಜ್ಯ ಸರ್ಕಾರ, ತಾನು ನೀಡಿರುವ ಜಿಎಸ್ ಟಿ ನೋಟಿಸನ್ನು ಹಿಂಪಡೆದಿದೆ ಎಂದು ಖುದ್ದು ಇನ್ಫೋಸಿಸ್ ಸಂಸ್ಥೆ ಪ್ರಕಟಿಸಿದೆ.32,000 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಆರೋಪಗಳ ಬಗ್ಗೆ ಕೇಂದ್ರೀಯ ಜಿಎಸ್​ಟಿ ಗುಪ್ತಚರ ವಿಭಾಗದ ಮಹಾನಿರ್ದೇಶಕರಿಗೆ ನೀವು ವಿವರಣೆ ಕೊಡಬೇಕು ಎಂದು ತನಗೆ ಕಳುಹಿಸಿರುವ ಸೂಚನಾ ಪತ್ರದಲ್ಲಿ ರಾಜ್ಯ ಸರ್ಕಾರ ತಿಳಿಸಿದೆ ಎಂದು ಇನ್ಫೋಸಿಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ಫೋಸಿಸ್​ ಪ್ರಕಟಣೆಯ್ಲಲಿ ಏನಿದೆ?

ಜುಲೈ 31ರಂದು ನೀಡಲಾಗಿರುವ ನೋಟಿಸ್​ನಲ್ಲಿ  32,000 ಕೋಟಿ ರೂ.ಗಳ ಜಿಎಸ್​​ಟಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿಲ್ಲ. ಹಾಗಾಗಿ, ಕೂಡಲೇ ತೆರಿಗೆಯನ್ನು ಕಟ್ಟಬೇಕೆಂದು ಸೂಚಿಸಿತ್ತು. ಅಲ್ಲದೆ, ಈ ತೆರಿಗೆಯು ಇನ್ಫೋಸಿಸ್ ಕಂಪನಿಯು ವಿದೇಶಗಳಲ್ಲಿನ ತನ್ನ ಶಾಖೆಗಳಿಂದ ಅಲ್ಲಿನ ಕಂಪನಿಗಳಿಗೆ ನೀಡುತ್ತಿರುವ ಸಾಫ್ಟ್ ವೇರ್ ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆಯಾಗಿದೆ ಎಂದು ಉಲ್ಲೇಖಿಸಿತ್ತು.

ವಿದೇಶಗಳಲ್ಲಿ ನೀಡುವ ಸೇವೆಗಳ ಮೇಲಿನ ಜಿಎಸ್ ಟಿಯನ್ನು ಈಗಾಗಲೇ ಕೇಂದ್ರ ಸರ್ಕಾರವೇ ರದ್ದುಗೊಳಿಸಿದೆ. ಇತ್ತೀಚೆಗಷ್ಟೇ ಈ ಕುರಿತಂತೆ ಮಾರ್ಗಸೂಚಿಯನ್ನು ಕೇಂದ್ರೀಯ ತೆರಿಗೆ ಇಲಾಖೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಈ ಹೊಸ ನಿಯಮದ ಪ್ರಕಾರ, ಭಾರತದಿಂದ ವಿದೇಶದ ಕಂಪನಿಗಳಿಗೆ ನೀಡಲಾಗುವ ಸಾಫ್ಟ್ ವೇರ್ ಸೇವೆಗಳು ಮಾತ್ರ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ ಎಂದು ರಾಜ್ಯ ಸರ್ಕಾರ ನೀಡಿದ್ದ ನೋಟಿಸ್​ಗೆ ಉತ್ತರಿಸಿತ್ತು.