ನ್ಯೂಸ್

ಶೇ.100 ಲಸಿಕೀಕರಣದತ್ತ ಕರ್ನಾಟಕ; ಆಗಸ್ಟ್‌ನಲ್ಲಿ ದಾಖಲೆ ಪ್ರಮಾಣದ ವ್ಯಾಕ್ಸಿನ್ ನೀಡಿಕೆ!

ಬೆಂಗಳೂರು: ಕರ್ನಾಟಕವು ಕೋವಿಡ್-19 ತಡೆಯುವ ನಿಟ್ಟಿನಲ್ಲಿ ನಡೆಸುತ್ತಿರುವ ಲಸಿಕೀಕರಣದಲ್ಲಿ ಶೇ.100ರತ್ತ ದಾಪುಗಾಲು ಇಡುತ್ತಿರುವುದಷ್ಟೇ ಅಲ್ಲದೆ, ಈ ತಿಂಗಳಲ್ಲಿ ಮಾಸಿಕ ಲಸಿಕೆ ನೀಡಿಕೆಯಲ್ಲಿ ದಾಖಲೆಯನ್ನೂ ಸಾಧಿಸಿದೆ.

ಆಗಸ್ಟ್ ತಿಂಗಳೊಂದರಲ್ಲೇ ರಾಜ್ಯದಲ್ಲಿ 1.17 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದು ಬೃಹತ್ ಲಸಿಕಾ ಅಭಿಯಾನ ಜನವರಿಯಲ್ಲಿ ಆರಂಭವಾದ ಬಳಿಕ ಒಂದು ತಿಂಗಳಲ್ಲಿ ನೀಡಲಾಗಿರುವ ಅತಿ ಹೆಚ್ಚಿನ ಡೋಸ್ ಆಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈ ಕುರಿತು ಮಾಹಿತಿ ಹೊರಹಾಕಿದ್ದಾರೆ.

ಲಸಿಕೀಕರಣ ಅಂದುಕೊಂಡಂತೆಯೇ ಸಾಗಿದರೆ, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಕರ್ನಾಟಕದಲ್ಲಿ ಈ ವರ್ಷದ ಡಿಸೆಂಬರ್‌ನಲ್ಲಿ 100% ಲಸಿಕೀಕರಣ ಗುರಿಯನ್ನು ತಲುಪಲಾಗುವುದು ಎಂಬ ಭರವಸೆಯನ್ನು ಸಚಿವರು ನೀಡಿದ್ದಾರೆ.