ನವದೆಹಲಿ: ಇಂದು ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸೇನಾ ಮುಖ್ಯಸ್ಥರು ಸೇರಿದಂತೆ ಅನೇಕ ಗಣ್ಯರು ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸಿ, ಗೌರವ ಸಮರ್ಪಿಸಿದ್ದಾರೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕಾರ್ಗಿಲ್ ವಿಜಯ್ ದಿವಸವು ಭಾರತದ ಅದ್ಭುತ ಧೈರ್ಯಶಾಲಿಗಳ ವೀರಗಾಥೆಯನ್ನು ಮುನ್ನೆಲೆಗೆ ತರುತ್ತದೆ. ಯುದ್ಧದಲ್ಲಿ ಹೋರಾಡಿದ ಪ್ರತಿಯೊಬ್ಬರು ಎಂದೆಂದಿಗೂ ಈ ದೇಶವಾಸಿಗಳಿಗೆ ಸ್ಫೂರ್ತಿಯ ಸೆಲೆಯಾಗಿಯೇ ಉಳಿಯುತ್ತಾರೆ. ಈ ವಿಶೇಷ ದಿನದಂದು, ನನ್ನ ಹೃದಯದ ಅಂತರಾಳದಿಂದ ವೀರ ಯೋಧರಿಗೆ ನಮಸ್ಕರಿಸುತ್ತೇನೆ. ಭಾರತಕ್ಕೆ ಜಯವಾಗಲಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ 1999ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಯೋಧರಿ ಸ್ಮಾರಕಕ್ಕೆ ಗೌರವ ಸಮರ್ಪಿಸಿದರು.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಹಾಗೂ ವಾಯುಪಡೆಯ ಮುಖ್ಯಸ್ಥರಾದ ಏರ್ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ದ್ರಾಸ್ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿತು. ಈ ಯುದ್ಧದಲ್ಲಿ ಸಾಕಷ್ಟು ಭಾರತೀಯ ಯೋಧರು ಹುತಾತ್ಮರಾದರು. ಹೀಗಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ಯುದ್ಧದಲ್ಲಿ ತಾಯ್ನಾಡಿಗಾಗಿ ಧೈರ್ಯ, ಸಾಹಸ ಪ್ರದರ್ಶಿಸಿ ಹುತಾತ್ಮರಾದ ಭಾರತೀಯ ವೀರ ಸೈನಿಕರನ್ನು ಹೆಮ್ಮೆಯಿಂದ ಸ್ಮರಿಸುವ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. (ಏಜೆನ್ಸೀಸ್)