ನ್ಯೂಸ್

ವಿಜಯವಾಣಿ ಆಯೋಜನೆ: ವೀರಯೋಧರಿಗೆ ಹೃದಯಸ್ಪರ್ಶಿ ಸನ್ಮಾನ, ದೇಶ ಭಕ್ತಿಯ ಸಿಂಚನ

ಮೋಹನ್​ ಶೆಟ್ಟಿ

ಕಾರ್ಗಿಲ್ ವಿಜಯ ದಿವಸ್ ರಜತ ಮಹೋತ್ಸವ ಸಂಭ್ರಮ | ವಿಜಯವಾಣಿ ಆಯೋಜನೆ

ಹುಬ್ಬಳ್ಳಿ: ವೈರಿ ರಾಷ್ಟ್ರ ಪಾಕಿಸ್ತಾನವನ್ನು ಸದೆಬಡಿದ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಧಾರವಾಡ ಜಿಲ್ಲೆಯ ವೀರಯೋಧರಿಗೆ ಹೃದಯರ್ಸ³ ಸನ್ಮಾನ, ದೇಶಭಕ್ತಿಯ ಕಿಚ್ಚು ಬಡಿದೆಬ್ಬಿಸಿದ ಗೀತೆಗಳ ಸಿಂಚನದೊಂದಿಗೆ ‘ಕಾರ್ಗಿಲ್ ವಿಜಯ ದಿವಸ್’ ರಜತ ಮಹೋತ್ಸವ ಸಂಭ್ರಮಕ್ಕೆ ನೂರಾರು ಜನರು ಸಾಕ್ಷಿಯಾದರು. ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿ 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸಿತು.

ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರಾದ ವೀರಪ್ಪ ಹಸಬಿ, ಭೀಮಪ್ಪ ಜಾಧವ, ಈಶ್ವರಪ್ಪ ಯಾಧವ, ನಿಂಗಪ್ಪ ಹೂಗಾರ, ಅಶೋಕ ತಿಗಡಿ, ಗುರುಪಾದಪ್ಪ ಯರಗುಪ್ಪಿ ಹಾಗೂ ಪಿ.ಕೆ. ವಸ್ತ್ರದ ಅವರನ್ನು ಆದರದಿಂದ ಸನ್ಮಾನಿಸಲಾಯಿತು. ಈ ವೇಳೆ ‘ಬೋಲೋ ಭಾರತ್ ಮಾತಾ ಕೀ ಜೈ’ ಘೊಷಣೆ ಮೊಳಗಿಸಿದ ಸಭಿಕರು ದೇಶಭಕ್ತಿ ಮೆರೆದರು. ಕೊಲ್ಲಾಪುರದ ಸ್ವರ ನಿನಾದ ಜಾಗೋ ಹಿಂದುಸ್ತಾನಿ ತಂಡದ ಸದಸ್ಯರು ಸುಮಧುರವಾಗಿ ದೇಶಭಕ್ತಿ ಗೀತೆ ಹಾಡಿದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ವೇದಿಕೆಯಲ್ಲಿದ್ದರು. ವಿಜಯಾನಂದ ಟ್ರಾವೆಲ್ಸ್ ಪ್ರೖೆ. ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ, ಯೋಗ ಗುರು ಭವರಲಾಲ ಆರ್ಯ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಕಾಶ ಬೆಂಡಿಗೇರಿ ಸೇರಿ ನಗರದ ಗಣ್ಯರು ಪಾಲ್ಗೊಂಡಿದ್ದರು.

ನಮ್ಮ ಯೋಧರ ಸಾಹಸದಿಂದ ಕಾರ್ಗಿಲ್ ಯುದ್ಧದಲ್ಲಿ ನಾವು ಜಯಶಾಲಿಯಾಗಿದ್ದಲ್ಲದೇ ಪಾಕಿಸ್ತಾನ ಅತಿಕ್ರಮಿಸಿದ್ದ ಸಂಪೂರ್ಣ ಭೂ ಪ್ರದೇಶವನ್ನು ಮರಳಿ ಪಡೆದೆವು. ಅಂದಿನ ಪ್ರಧಾನಿ ವಾಜಪೇಯಿ ಅವರು ಯುದ್ಧ ಭೂಮಿಗೆ ತೆರಳಿ ಸೈನಿಕರಿಗೆ ಸ್ಪೂರ್ತಿ ತುಂಬಿದ್ದರು.

| ಡಾ. ವಿಜಯ ಸಂಕೇಶ್ವರ, ಚೇರ್ಮನ್, ವಿಆರ್​ಎಲ್ ಸಮೂಹ ಸಂಸ್ಥೆಗಳು

ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಧಾರವಾಡ ಜಿಲ್ಲೆಯ ವೀರಯೋಧರಾದ ವೀರಪ್ಪ ಹಸಬಿ, ಭೀಮಪ್ಪ ಜಾಧವ, ಈಶ್ವರಪ್ಪ ಯಾಧವ, ನಿಂಗಪ್ಪ ಹೂಗಾರ, ಅಶೋಕ ತಿಗಡಿ, ಗುರುಪಾದಪ್ಪ ಯರಗುಪ್ಪಿ ಹಾಗೂ ಪಿ.ಕೆ. ವಸ್ತ್ರದ ಅವರನ್ನು ಸನ್ಮಾನಿಸಲಾಯಿತು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಇತರರು ಇದ್ದರು.

ದೇಶದ ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ ಎಂದು ಭಾರತವು ಜಗತ್ತಿಗೆ ಸಾರಿ ಹೇಳಿದ್ದು ಕಾರ್ಗಿಲ್ ಯುದ್ಧ. ಈ ಕಾರ್ಯಕ್ರಮದ ಮೂಲಕ ವಿಜಯವಾಣಿ ದಿನಪತ್ರಿಕೆ ದೇಶಭಕ್ತಿಯನ್ನು ಜಾಗೃತಗೊಳಿಸಿದೆ.

| ಮಹೇಶ ಟೆಂಗಿನಕಾಯಿ ಶಾಸಕ

ವೀರಯೋಧರನ್ನು ಸನ್ಮಾನಿಸುವ ಮೂಲಕ ವಿಜಯವಾಣಿ ಅರ್ಥ ಪೂರ್ಣ ಕಾರ್ಯಕ್ರಮ ಆಯೋಜಿಸಿದ್ದು, ರಾಷ್ಟ್ರ ಭಕ್ತಿ ಬೆಳೆಸುವ ಕೆಲಸ ಮಾಡಿದೆ.

| ಪ್ರಸಾದ ಅಬ್ಬಯ್ಯ ಶಾಸಕ

ಸೈನಿಕರ ತ್ಯಾಗ, ಬಲಿದಾನದಿಂದ ನಾವೆಲ್ಲ ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಯೋಧರ ಸೇವೆ ಅನನ್ಯ, ಸರ್ವತ್ರ ಗೌರವಾರ್ಹವಾದುದು.

| ಡಾ. ವಿ.ಎಸ್.ವಿ. ಪ್ರಸಾದ ಎಂಡಿ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್