ನ್ಯೂಸ್

ಪಿಯು ವಿದ್ಯಾರ್ಥಿನಿಯರಿಗೂ ಕರಾಟೆ ಕೋಚಿಂಗ್: ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಣಾ ಪ್ರಶಿಕ್ಷಣ್ ಹೆಸರಲ್ಲಿ ಕಾರ್ಯಕ್ರಮ

Webdesk - Ravikanth

ಬೆಂಗಳೂರು: ಹೆಣ್ಣು ಮಕ್ಕಳ ಸ್ವರಕ್ಷಣೆಗಾಗಿ ಕರಾಟೆಯನ್ನು ಇನ್ಮುಂದೆ ಪಿಯು ವಿದ್ಯಾರ್ಥಿನಿಯರಿಗೂ ಕಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ‘ಸಮಗ್ರ ಶಿಕ್ಷಣ ಕರ್ನಾಟಕ’ವು 2021-22ನೇ ಸಾಲಿನಲ್ಲಿ ರಾಜ್ಯದ 4245 ಸರ್ಕಾರಿ ಪ್ರೌಢಶಾಲೆ ಹಾಗೂ 441 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ‘ರಾಣಿ ಲಕ್ಷ್ಮೀ ಬಾಯಿ ಆತ್ಮ ರಕ್ಷಣಾ ಪ್ರಶಿಕ್ಷಣ್’ ಎಂಬ ಕಾರ್ಯಕ್ರಮದಡಿ ಸ್ವರಕ್ಷಣಾ ಕೌಶಲಗಳ ತರಬೇತಿ ನೀಡುವುದರ ಮೂಲಕ ಅವರಲ್ಲಿ ಸ್ವರಕ್ಷಣಾ ಕೌಶಲಗಳ ಸಾಮರ್ಥ್ಯ ಬೆಳೆಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರತಿ ಶಾಲೆ ಮತ್ತು ಕಾಲೇಜುಗಳಿಗೆ 5 ಸಾವಿರ ರೂ. ಅನುದಾನವನ್ನು ನೀಡುತ್ತಿದೆ. ಈ ಮೊದಲು ಕೇವಲ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಿಕೊಡಲಾಗುತ್ತಿತ್ತು. ಈ ವರ್ಷದಿಂದ ಪಿಯು ವಿದ್ಯಾರ್ಥಿನಿಯರಿಗೂ ಇದನ್ನು ವಿಸ್ತರಿಸಲು ಮುಂದಾಗಿದೆ.

ತರಬೇತಿ ಉದ್ದೇಶ: ವಿದ್ಯಾರ್ಥಿನಿಯರ ದೈಹಿಕ, ಮಾನಸಿಕ ಬೆಳವಣಿಗೆ ಅಭಿವೃದ್ಧಿ ಪಡಿಸುವುದು. ವಿದ್ಯಾರ್ಥಿನಿಯರಲ್ಲಿ ಸ್ವ-ರಕ್ಷಣಾ ಕೌಶಲಗಳನ್ನು ಬೆಳೆಸಿ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದು. ಹೆಣ್ಣು ಮಕ್ಕಳು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವಂತೆ ಪ್ರೇರೇಪಿಸುವುದು ತರಬೇತಿ ಉದ್ದೇಶವಾಗಿದೆ.

ಯಾವ ಸಮಯ?: ಸರ್ಕಾರಿ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಾರಕ್ಕೆ 2 ಅವಧಿಯಂತೆ, ತಿಂಗಳಿಗೆ 8 ಅವಧಿ(1 ಅವಧಿಗೆ 45 ನಿಮಿಷ)ಯಂತೆ ಒಟ್ಟು 20 ಅವಧಿಗಳ ತರಬೇತಿ ನೀಡುವುದು. ತರಬೇತಿಯನ್ನು ಶಾಲಾ-ಕಾಲೇಜುಗಳ ಮುಖ್ಯಸ್ಥರ ನೇತೃತ್ವದಲ್ಲಿ ಸ್ಥಳೀಯ ಸಂಪನ್ಮೂಲ ತರಬೇತಿದಾರರಿಂದ ನೀಡುವುದು. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಎನ್​ಸಿಸಿ ಹಾಗೂ ಇತರ ಸಂಘ- ಸಂಸ್ಥೆಗಳ ನೆರವಿನಿಂದ ವಿದ್ಯಾರ್ಥಿನಿಯರಿಗೆ ಕೌಶಲಗಳ ಬಗ್ಗೆ ಮಾಹಿತಿ ನೀಡಬೇಕೆಂದು ಇಲಾಖೆ ತಿಳಿಸಿದೆ. ತರಬೇತಿದಾರನನ್ನು ಆಯ್ಕೆ ಮಾಡುವ ವೇಳೆ ವಿದ್ಯಾರ್ಹತೆ ಪ್ರಮಾಣಪತ್ರ ಪರಿಶೀಲಿಸಿ, ಸದ್ವರ್ತನೆ ತರಬೇತುದಾರರನ್ನು ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಿದೆ. ತರಬೇತುದಾರರಿಗೆ ಪ್ರತಿ ಅವಧಿಗೆ 200 ರೂ.ಗಳಂತೆ 200 ಅವಧಿಗೆ 4,000 ರೂ. ಗೌರವಧನ ನೀಡುವುದು. ಯೋಜನೆ ಅನುಷ್ಠಾನ ಮಾಡಿರುವುದನ್ನು ಪೋಟೋ ಸಹಿತ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ಕಳುಹಿಸಬೇಕೆಂದು ಸೂಚನೆ ನೀಡಲಾಗಿದೆ.

ವಿದ್ಯಾರ್ಥಿನಿಯರಿಂಗೆ ಕರಾಟೆ ಕಲಿಸುವುದು ಉತ್ತಮ ನಿರ್ಧಾರ. ಸುತ್ತೋಲೆ ಬಂದ ಬಳಿಕ ಅನುಷ್ಠಾನ ಮಾಡಲಾಗುವುದು.

| ಎ.ಎಸ್.ರವಿ ಪ್ರಾಂಶುಪಾಲ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಮಲ್ಲೇಶ್ವರ

ಹೆಚ್ಚುವರಿ ಶುಲ್ಕಕ್ಕೆ ಬೀಳದ ಕಡಿವಾಣ

ಬೆಂಗಳೂರು: ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಇತರ ಶುಲ್ಕದ ರೂಪದಲ್ಲಿ ಪಡೆಯಲು ಸರ್ಕಾರವೇ ಅನುವು ಮಾಡಿಕೊಟ್ಟಿದ್ದರೂ, ಹೆಚ್ಚುವರಿ ಶುಲ್ಕ ವಸೂಲಿಗೆ ಕಡಿವಾಣ ಬಿದ್ದಿಲ್ಲ!

ಪತ್ರಿನಿತ್ಯ ಶುಲ್ಕ ವಿಚಾರವಾಗಿ ವಿದ್ಯಾರ್ಥಿಗಳು ದೂರು ಸಲ್ಲಿಸುತ್ತಲೇ ಇರುತ್ತಾರೆ. ಇದೇ ರೀತಿ ಈ ಬಾರಿ ಪ್ರವೇಶ ಮೇಲ್ವಿಚಾರಣಾ ಸಮಿತಿಗೆ 70ಕ್ಕೂ ಹೆಚ್ಚು ದೂರು ದಾಖಲಾಗಿವೆ. ಕಾಲೇಜುಗಳು ಕನಿಷ್ಠ 40 ಸಾವಿರ ರೂ.ಗಳಿಂದ 1 ಲಕ್ಷ ರೂ. ವರೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಮುಂದಾಗಿವೆ. ಕಾಲೇಜುಗಳ ಹೆಚ್ಚುವರಿ ಶುಲ್ಕದ ಪ್ರಮಾಣ ಕೇಳಿ ಬೆಚ್ಚಿ ಬೀಳುವ ವಿದ್ಯಾರ್ಥಿಗಳು ಒಂದೆಡೆಯಾದರೆ, ವಿಧಿ ಇಲ್ಲದೆಯೇ ಪಾವತಿ ಮಾಡುವವರು ಮತ್ತೊಂದು ಕಡೆ ಇದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರು ನೀಡುತ್ತಾರೆ. ಸಾಮಾನ್ಯವಾಗಿ ದೂರು ನೀಡುವ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇದೆ. ಹಾಗೇ ನೋಡಿದರೆ, ಶೇ.80 ವಿದ್ಯಾರ್ಥಿಗಳು ಕಾಲೇಜುಗಳ ಒತ್ತಡ ಮತ್ತು ಬೆದರಿಕೆಗೆ ಮಣಿದು ಶುಲ್ಕ ಪಾವತಿಸುತ್ತಿದ್ದಾರೆ.

ಹೆಚ್ಚುವರಿ ಶುಲ್ಕ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸಿಇಟಿ ಮೂಲಕ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ಬಿ ಫಾರ್ಮ, ಫಾರ್ಮಸಿ ಕೋರ್ಸ್​ಗಳಿಗೆ ಸಿಇಟಿ ಮೂಲಕ ಸೀಟು ಆಯ್ಕೆ ಮಾಡಲಾಗುತ್ತದೆ. ಈ ರೀತಿ ಸೀಟು ಪಡೆದುಕೊಂಡ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯುತ್ತಾರೆ. ಈ ರೀತಿ ಪ್ರವೇಶ ಪಡೆಯುವ ವೇಳೆ ಸರ್ಕಾರ ನಿಗದಿ ಮಾಡಿರುವ ಶುಲ್ಕದ ಹೊರತಾಗಿ ಕಾಲೇಜು ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತವೆ.

ಈ ಬಾರಿ ಇಂಜಿನಿಯರಿಂಗ್ ಶುಲ್ಕ ಹೆಚ್ಚಳ ಮಾಡಿದ್ದು, ಕಾಲೇಜು ಆಡಳಿತ ಮಂಡಳಿಗಳೇ ಹೆಚ್ಚುವರಿ ಶುಲ್ಕವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಕಾಲೇಜು ಆಡಳಿತ ಮಂಡಳಿಗಳು ಹೆಚ್ಚುವರಿಯಾಗಿ ಇತರ ಶುಲ್ಕದ ನೆಪದಲ್ಲಿ ಗರಿಷ್ಠ 20 ಸಾವಿರ ರೂ. ಪಡೆಯಲು ಸೂಚಿಸಿದೆ. ಈ ಹೆಚ್ಚುವರಿ ಶುಲ್ಕವನ್ನೂ ಸಹ ಸಾಮಾನ್ಯಶುಲ್ಕದ ಜತೆಗೆ ವಿದ್ಯಾರ್ಥಿಗಳು ಪಾವತಿಸುವಂತೆ ಸರ್ಕಾರ ಆದೇಶ ಮಾಡಿದೆ. ಆದರೂ, ಕೆಲ ಕಾಲೇಜುಗಳು ಹೆಚ್ಚುವರಿಯಾಗಿ ಶುಲ್ಕ ಪಡೆಯುತ್ತಿವೆ.

ಫಾರ್ಮ ಕಾಲೇಜುಗಳೇ ಹೆಚ್ಚು: ರಾಜ್ಯದಲ್ಲಿ 160 ಫಾರ್ಮ ಕಾಲೇಜುಗಳಿವೆ. ಸೀಟು ಹಂಚಿಕೆಯಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಂದ ಇತರ ಶುಲ್ಕ ನೆಪದಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಬಗ್ಗೆ 40ಕ್ಕೂ ಹೆಚ್ಚು ದೂರು ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ಬಂದಿದೆ. ಇದರಲ್ಲಿ ಬಹುತೇಕ ದೂರುಗಳನ್ನು ಪರಿಶೀಲಿಸಿ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿದೆ.

ಯಾವೆಲ್ಲ ಶುಲ್ಕ ವಸೂಲಿ?

  • ಹಾಸ್ಟೆಲ್​ಗೆ ಹೆಚ್ಚು ಶುಲ್ಕ
  • ವಿವಿಧ ಆಡ್ ಆನ್ ಕೋರ್ಸ್
  • ಸಾರಿಗೆ, ಗ್ರಂಥಾಲಯ
  • ಸಮವಸ್ತ್ರ
  • ವೈ-ಫೈ, ಸೆಮಿನಾರ್
  • ಕ್ರೀಡಾ, ಸಾಂಸ್ಕೃತಿಕ