ನ್ಯೂಸ್

ಕಪಿಲ್​ ಶರ್ಮ ಕೆಫೆ ಮೇಲೆ ನಡೆದ ಗುಂಡಿನ ದಾಳಿ ಹಿಂದಿನ ಕಾರಣ ಬಯಲು: ಇಲ್ಲೂ ಬಂತು ಸಲ್ಲು ಹೆಸರು! Kapil Sharma

Kapil Sharma : ಕೆನಡಾದಲ್ಲಿರುವ ಬಾಲಿವುಡ್​ ಹಾಸ್ಯನಟ ಕಪಿಲ್ ಶರ್ಮ ಒಡೆತನದ ಕೆಫೆಯ ಮೇಲೆ ಖಲಿಸ್ತಾನಿ ಉಗ್ರರು ಇತ್ತೀಚೆಗೆ ಗುಂಡಿನ ದಾಳಿ ನಡೆಸಿದ್ದರು. ಇದೀಗ ಆ ದಾಳಿಗೆ ಕಾರಣ ಏನೆಂಬುದು ಬಹಿರಂಗವಾಗಿದೆ. ಅದೇನೆಂದರೆ, ಕೆಫೆಯ ಉದ್ಘಾಟನಾ ಸಮಾರಂಭಕ್ಕೆ ಸಲ್ಮಾನ್​ ಖಾನ್​ಗೆ ಆಹ್ವಾನ ನೀಡಿದ್ದಕ್ಕೆ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಸದಸ್ಯನದ್ದು ಎನ್ನಲಾದ ಆಡಿಯೋ ತುಣುಕೊಂದು ಬಹಿರಂಗವಾಗಿದೆ. ಆ ಆಡಿಯೋ ಕ್ಲಿಪ್‌ನಲ್ಲಿ ಕೇಳಿಬರುವ ಧ್ವನಿಯು ಬಿಷ್ಣೋಯ್ ಗುಂಪಿನ ಸುಲಿಗೆಕೋರ ಹ್ಯಾರಿ ಬಾಕ್ಸರ್‌ನದ್ದಾಗಿರುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇದೇ ಹ್ಯಾರಿ ಬಾಕ್ಸರ್​, ಸಲ್ಮಾನ್ ಜೊತೆ ಕೆಲಸ ಮಾಡುವ ಯಾವುದೇ ನಿರ್ದೇಶಕ, ನಿರ್ಮಾಪಕ ಅಥವಾ ಕಲಾವಿದರ ಎದೆಗೆ ಗುಂಡು ಹಾರಿಸಲಾಗುವುದು ಎಂದು ಈ ಹಿಂದೆ ಎಚ್ಚರಿಸಿದ್ದಾನೆ.

ಕಪಿಲ್ ಶರ್ಮ​ ಅವರು ನೆಟ್​ಫ್ಲಿಕ್ಸ್​ ಶೋನಲ್ಲಿ ಸಲ್ಮಾನ್ ಖಾನ್ ಅವರನ್ನು ತಮ್ಮ ರೆಸ್ಟೋರೆಂಟ್​ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದರಿಂದ ಎರಡು ಬಾರಿ ರೆಸ್ಟೋರೆಂಟ್​ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಆ ವ್ಯಕ್ತಿ ಹೇಳುವುದನ್ನು ಆಡಿಯೋದಲ್ಲಿ ಕೇಳಬಹುದು. ಅಂದಹಾಗೆ, ಜೂನ್ 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಮೊದಲು ಪ್ರದರ್ಶನಗೊಂಡ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ದ ಸೀಸನ್ 3ರ ಮೊದಲ ಕಂತಿನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡರು.

ಅಂದಹಾಗೆ, ಬಿಷ್ಣೋಯ್ ಸಮುದಾಯವು ದೇವರೆಂದು ಪೂಜಿಸುವ ಕೃಷ್ಣಮೃಗವನ್ನು ಕೊಂದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಜಾಮೀನು ಪಡೆದುಕೊಂಡಿದ್ದಾರೆ. 1998ರಲ್ಲಿ ಈ ಘಟನೆ ನಡೆಯಿತು. ಅಂದಿನಿಂದ ಬಿಷ್ಣೋಯ್ ಸಮುದಾಯವು ಸಲ್ಮಾನ್​ ಖಾನ್​ ಮೇಲೆ ಆಕ್ರೋಶಗೊಂಡಿದೆ. ಅಲ್ಲದೆ, ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್​ ಸಲ್ಮಾನ್​ ಖಾನ್​ ಹಿಂದೆ ಬಿದ್ದಿದೆ.

ಗುರುವಾರ (ಆಗಸ್ಟ್​ 07) ಸರ್ರೆಯಲ್ಲಿರುವ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆ ಮೇಲೆ ಮತ್ತೊಮ್ಮೆ ದಾಳಿ ನಡೆದಿದೆ. ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಗುಂಡಿನ ದಾಳಿ ನಡೆದಿದೆ. ಇದರ ಬೆನ್ನಲ್ಲೇ ದಾಳಿಗೆ ಕಾರಣವೂ ಬಯಲಾಗಿದೆ. (ಏಜೆನ್ಸೀಸ್​)