ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನೂರು ದಿನ ಓಡಿದ ಚಿತ್ರಗಳೆಷ್ಟೋ ಲೆಕ್ಕ ಇಟ್ಟವರಿಲ್ಲ. ಈಗೊದು ದಶಕದ ಹಿಂದಿನವರೆಗೂ ನೂರಾರು ಚಿತ್ರಗಳು ಯಶಸ್ವಿಯಾಗಿ ಶತಕ ಬಾರಿಸಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಂಥದ್ದೊಂದು ಸಂಪ್ರದಾಯವೇ ಕಡಿಮೆಯಾಗಿರುವಾಗ, ರಿಷಭ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ.
ಹೌದು, ಸೆ.30ರಂದು ಬಿಡುಗಡೆಯಾಗಿದ್ದ 'ಕಾಂತಾರ' ಚಿತ್ರವು ಇದೀಗ 100 ದಿನಗಳನ್ನು ಮುಗಿಸಿದೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಜಗತ್ತಿನಾದ್ಯಂತ 450 ಕೋಟಿ ರೂ. ಗಳಿಕೆ ಮಾಡಿದ್ದು, ಈ ಪೈಕಿ ಕರ್ನಾಟಕದಿಂದಲೇ 175 ಕೋಟಿ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.
'ಕಾಂತಾರ' ಚಿತ್ರವನ್ನು ಕರ್ನಾಟಕದಲ್ಲಿ 80 ಲಕ್ಷ ಜನ ನೋಡಿರುವುದು ಒಂದು ಕಡೆಯಾದರೆ, ಒಂದು ಕೋಟಿಗೂ ಹೆಚ್ಚು ಟಿಕೆಟ್ಗಳು ಇದುವರೆಗೂ ಮಾರಾಟವಾಗಿವೆ. ಚಿತ್ರವು 300 ಕೇಂದ್ರಗಳಲ್ಲಿ 50 ದಿನಗಳನ್ನು ಪೂರೈಸಿತ್ತು. ಈಗ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಯಶಸ್ವಿಯಾಗಿ ಮುಗಿಸಿದೆ.
'ಕಾಂತಾರ' ಚಿತ್ರವು ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದಾಗಿ, ಕನ್ನಡ ಚಿತ್ರವು ಬಿಡುಗಡೆಯಾದ ಎರಡು ವಾರಗಳ ಅಂತರದಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಯಿತು.
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.