ನ್ಯೂಸ್

'ಕಾಂತಾರ' ಕಲಾವಿದರ ಪಾತ್ರ ನನ್ನನ್ನು ಮೂಕವಿಸ್ಮಿತಗೊಳಿಸಿದೆ; 'ಸುಮಲತಾ ಅಂಬರೀಶ್' ಮೆಚ್ಚುಗೆ| Kantara Chapter 1

Kantara Chapter 1: ಅ.02ರಂದು ರಿಲೀಸ್​ ಆದ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ‘ಕಾಂತಾರ ಚಾಪ್ಟರ್ 1’ ಚಿತ್ರತಂಡಕ್ಕೆ ಹೊಸ ಮೈಲಿಗಲ್ಲು ನೀಡಿದ್ದು, ವ್ಯಾಪಕ ಮನ್ನಣೆಯನ್ನು ತಂದುಕೊಟ್ಟಿದೆ. ಇದು ದಿನ ಕಳೆದಂತೆ ಚಿತ್ರವು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವಲ್ಲಿಯೂ ಯಶಸ್ವಿಯಾಗಿದೆ. ಇನ್ನೂ ಈ ಚಿತ್ರಕ್ಕೆ ದೊಡ್ಡ ದೊಡ್ಡ ಸೆಲೆಬ್ರೆಟಿಗಳೇ ಸಹಬಾಷ್ ಎನ್ನುತ್ತಿದ್ದಾರೆ. ಅದರಂತೆ ಮಾಜಿ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಶ್ ಕೂಡ ಚಿತ್ರದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಮಲತಾ ಅಂಬರೀಶ್ ಹೇಳಿದ್ದೇನು.?

ಡಿವೈನ್ ಸ್ಟಾರ್​ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್​ 1 ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ದಸರಾ ಹಬ್ಬದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಸೂಪರ್ ಹಿಟ್ ಚಿತ್ರ ಕಾಂತಾರದ ಪ್ರೀಕ್ವೆಲ್​ ಆಗಿರುವ ಚಾಪ್ಟರ್​ 1 ಭರ್ಜರಿ ಯಶಸ್ಸು ಕಂಡಿದ್ದು, ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಈ ಸಿನಿಮಾ ಕರ್ನಾಟಕದ ಭೂತಕೋಲದ ಪ್ರಾಚೀನ ಕಲೆಯನ್ನು ಆಧರಿಸಿ ಚಿತ್ರೀಕರಿಸಲಾಗಿದೆ. ಬ್ಲಾಕ್​ಬಸ್ಟರ್​ನತ್ತ ಸಾಗುತ್ತಿರುವ ಕಾಂತಾರ ಈಗ ಬಾಕ್ಸ್ ಆಫೀಸ್​ನಲ್ಲಿ ಕೇವಲ 9 ದಿನಕ್ಕೆ 509.75 ಕೋಟಿ ರೂ. ಗಳಿಸಿದೆ..

ಆತ್ಮೀಯ ರಿಷಭ್ ಅವರೇ, ನಿನ್ನೆ ಕಾಂತಾರ 1 ಸಿನಿಮಾ ನೋಡಿದೆ. ಕಾಂತಾರದ ಅದ್ಭುತ ಯಶಸ್ಸಿಗೆ ಅಭಿನಂದನೆಗಳು. ನಿಮ್ಮ ನಿರ್ದೇಶನ ಹಾಗೂ ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ ಪರಿ ನನ್ನನ್ನು ಮೂಕವಿಸ್ಮಿತಗೊಳಿಸಿದೆ. ಈ ದೃಶ್ಯ ವೈಭವವನ್ನು ತೆರೆಯ ಮುಂದೆ ತರಲು ಹಾಕಿದ ಪರಿಶ್ರಮ ಹಾಗೂ ಕರ್ನಾಟಕದ ಜಾನಪದ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸೌಂದರ್ಯವನ್ನು ಪ್ರದರ್ಶಿಸಲು ನಿಮ್ಮ ಶ್ರಮವನ್ನು ಅತ್ಯಂತ ಗೌರವ ಹಾಗೂ ಹೆಮ್ಮೆಯಿಂದ ಶ್ಲಾಘಿಸುತ್ತೇನೆ. ಅಕ್ಷರಶಃ ಇದೊಂದು ಸಿನಿಮಾಟಿಕ್ ಮಾಸ್ಟರ್‌ಪೀಸ್‌ ಆಗಿದೆ. ಕಾಂತಾರ -1 ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಕಲೆಯ ಬಗ್ಗೆ ನಿಮಗಿರುವ ಉತ್ಸಾಹ ಮತ್ತು ಶ್ರದ್ಧೆ ಯುವ ಕಲಾವಿದರು ಹಾಗೂ ಚಿತ್ರರಂಗಕ್ಕೆ ಸ್ಫೂರ್ತಿಯಾಗಿದೆ. ಇಡೀ ಕಾಂತಾರ ತಂಡವು ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ಪ್ರಶಂಸೆಗೆ ಅರ್ಹವಾಗಿದೆ. ಕನ್ನಡ ಚಿತ್ರರಂಗದ ಪಯಣಕ್ಕೆ ಹೊಸ ಆಯಾಮವನ್ನು ಹಾಕಿಕೊಟ್ಟಿರುವ ಈ ದಂತಕಥೆ ಕನ್ನಡ ಚಿತ್ರರಂಗದ ಇತಿಹಾಸ ಪುಟದಲ್ಲಿ ವಿಶೇಷ ಸ್ಥಾನ ಪಡೆಯಲಿದೆ. ನಮ್ಮ ಚಿತ್ರರಂಗಕ್ಕೆ ವಿಶ್ವದಾದ್ಯಂತ ಗೌರವ ಮತ್ತು ಕೀರ್ತಿಯನ್ನು ತಂದಿರುವ ನಿಮ್ಮ ಮುಂದಿನ ಎಲ್ಲಾ ಯೋಜನೆಗಳು ಇನ್ನಷ್ಟು ಯಶಸ್ಸನ್ನು ತಂದುಕೊಡಲಿ ಎಂದು ಶುಭ ಹಾರೈಸುವೆ ಎಂದು ಸುಮಲತಾ ಅಂಬರೀಶ್ ಕಾಂತಾರ ಸಿನಿಮಾ ಹಾಗೂ ಕಲಾವಿದರನ್ನು ಹಾಡಿ ಹೊಗಳಿದ್ದಾರೆ.

‘ಕಾಂತಾರ’ ತಾರಾಗಣ

‘ಕಾಂತಾರ ಚಾಪ್ಟರ್​ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ಕಿಶೋರ್​, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್​​ ಸಂಗೀತ ನೀಡಿದ್ದು, ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಡಿ ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದಾರೆ,(ಏಜೆನ್ಸೀಸ್)