ಕಣ್ಣೂರು: ಮಾನವೀಯತೆಯನ್ನು ಅಣುಕಿಸುವಂತೆ ಘಟನೆ ಕೇರಳದ ಥಲಸ್ಸೆರಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಯುವಕನೊಬ್ಬ ಆರು ವರ್ಷದ ಬಾಲಕನ ಮೇಲೆ ಮೃಗೀಯವಾಗಿ ಹಲ್ಲೆ ಮಾಡಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಕಾರನ್ನು ಒರಗಿಕೊಂಡಿದ್ದ ಬಾಲಕನಿಗೆ ಪೊನ್ನಿಯಾಂಪಲಂ ನಿವಾಸಿ ಸಿಶಾದ್ ಎಂಬಾತ ಬಲವಾಗಿ ಜಾಡಿಸಿ, ಒದ್ದಿರುವಂತಹ ಆಘಾತಕಾರಿ ದೃಶ್ಯವಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವಿಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.
ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು ಆರೋಪಿ ಸಿಶಾದ್ನನ್ನು ಬಂಧಿಸಿದ್ದಾರೆ. ಕೊಲೆ ಯತ್ನ ಪ್ರಕರಣ ಸೇರಿದಂತೆ ಆತನ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕಾರನ್ನು ಸಹ ಸೀಜ್ ಮಾಡಲಾಗಿದೆ.
ಆರೋಪಿ ಸಿಶಾದ್, ರಾಜಸ್ಥಾನ ಮೂಲದ ಗಣೇಶ್ (6) ಎಂಬುವನ ಮೇಲೆ ಹಲ್ಲೆ ಮಾಡಿದ್ದಾನೆ. ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿಗೆ ಬಾಲಕ ಒರಗಿಕೊಂಡಿದ್ದ. ಈ ವೇಳೆ ಸಿಶಾದ್ ಜೋರಾಗಿ ಒದ್ದಿದ್ದಾನೆ. ಇದರಿಂದ ಬಾಲಕನ ಬೆನ್ನಿಗೆ ಗಾಯವಾಗಿದೆ. ಈ ವೇಳೆ ಸಿಶಾದ್ ಜೊತೆ ಓರ್ವ ಮಹಿಳೆಯು ಸಹ ಇದ್ದಳು. ಇಷ್ಟೆಲ್ಲ ಆದರೂ ಬಾಲಕನನ್ನು ಸಂತೈಸದೇ ಆಕೆ ಕಾರು ಹತ್ತಿ ಕುಳಿತಳು.
ಕೆಲವು ಮಂದಿ ಸಿಶಾದ್ ಕೃತ್ಯವನ್ನು ನೋಡಿ, ಆತನ ಬಳಿ ಧಾವಿಸಿ ಪ್ರಶ್ನೆ ಮಾಡಿದರು. ಆದರೆ, ತನ್ನನ್ನು ತಾನು ಸಮರ್ಥನೆ ಮಾಡಿಕೊಂಡ ಸಿಶಾದ್, ಅಲ್ಲಿಂದ ಕಾಲ್ಕಿತ್ತಿದ್ದ. ಬಾಲಕ ಗಣೇಶ್ ಕೇರಳಕ್ಕೆ ಉದ್ಯೋಗ ಅರಸಿ ವಲಸೆ ಬಂದ ಕುಟುಂಬದ ಸದಸ್ಯ.
ಈ ಘಟನೆ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಪ್ರತಿಕ್ರಿಯಿಸಿ, ಆಯೋಗ ಮಧ್ಯಪ್ರವೇಶಿಸಿ ವರದಿ ಒಡೆಯಲಿದೆ ಎಂದು ತಿಳಿಸಿದರು. ಅಗತ್ಯಬಿದ್ದರೆ ಆಯೋಗವು ಬಾಲಕನಿಗೆ ವೈದ್ಯಕೀಯ ಸೇವೆ ನೀಡಲು ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು. (ಏಜೆನ್ಸೀಸ್)