ನ್ಯೂಸ್

ಜರ್ಮನಿಯಲ್ಲಿ ಬಿಡುಗಡೆ ಆಯ್ತು ಅನಿವಾಸಿ ಕನ್ನಡಿಗರಿಂದ ಕನ್ನಡ ಹಾಡು

| ಅರವಿಂದ ಸುಬ್ರಮಣ್ಯ, ಮ್ಯೂನಿಕ್

ಮ್ಯೂನಿಕ್​: ದೂರದ ಜರ್ಮನಿಯಲ್ಲಿ ಅನಿವಾಸಿ ಕನ್ನಡಿಗರು ರಚಿಸಿ, ನಿರ್ದೇಶಿಸಿ, ಸಂಗೀತ ಸಂಯೋಜನೆ ಮಾಡಿದ ಕನ್ನಡ ಹಾಡು ಬಿಡುಗಡೆಯಾಗಿದೆ. ‘ಹನಿ ಹನಿ’ ಶೀರ್ಷಿಕೆಯ  ಮೊದಲ ಕನ್ನಡ ಹಾಡನ್ನು ಜುಲೈ 6ರಂದು ಔಪಚಾರಿಕವಾಗಿ ಯುಟ್ಯೂಬ್ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.

ಜರ್ಮನಿಯ ಮ್ಯೂನಿಕ್ ನಗರದಲ್ಲಿರುವ ಪಾಯಿಂಟ್ ಬ್ಲಾನ್ಕ್ ಕ್ರಿಯೆಷನ್ಸ್ ತಂಡ ಈ ಹಾಡನ್ನು ಸೃಷ್ಟಿಸಿದೆ. ಈ ತಂಡದ ರಾಘವ್ ನಾಯ್ಡು, ಗಿರೀಶ್ ಕುಮಾರ್ ತಿವಾರಿ, ಲೋಕೇಶ್ ದೇವರಾಜ್, ವಿಶಾಲ್ ನೈಧ್ರುವ್ ಹಾಗೂ ಜರ್ಮನಿಯ ಭಾರತೀಯ ರಾಯಭಾರ ಕಚೇರಿಯ ಸಾಂಸ್ಕೃತಿಕ ವಿಭಾಗದ ಅಧಿಕಾರಿ ಶ್ರೀ ನಿರಂಜನ್, ಸಿರಿಗನ್ನಡ ಕೂಟ ಮ್ಯೂನಿಕ್ ಅಧ್ಯಕ್ಷ ಶ್ರೀಧರ್ ಲಕ್ಷ್ಮಪುರ ಮತ್ತು ಪದಾಧಿಕಾರಿಗಳು, ಇಂಡೋ ಯುರೋಪೀಯನ್ ಸಂಸ್ಥೆಯ ಪ್ರಣೀತ್ ನಿಸಂಕರ ಭೀಮಾಸ್ ರೆಸ್ಟೋರೆಂಟ್ ನಲ್ಲಿ ಉಪಸ್ಥಿತರಿದ್ದರು.

ಈ ವಿಶೇಷ ಕನ್ನಡ ಹಾಡಿಗೆ ಎನ್​ಆರ್​ಐ ಕನ್ನಡಿಗರೇ ಬರಹಗಾರರು, ಕಲಾವಿದರು ಛಾಯಾಗ್ರಾಹಕರು ಹಾಗೂ ನಿರ್ದೇಶಕರು. ವಿದೇಶದಲ್ಲೇ ರಚನೆಯಾದ ಈ ಹಾಡಿಗೆ ಸಂಗೀತ ಹಾಗು ಸ್ವರ ಸಂಯೋಜನೆ ಮಾಡಿರುವುದು ಆ ತಂಡವೇ. ಈ ಹಾಡಿನ ಚಿತ್ರೀಕರಣಗಳಿಂದ ಮೂಡಿಬಂದ  ‘ಹನಿ ಹನಿ ’ ಶೀರ್ಷಿಕೆಯ  ಮೊದಲ ಕನ್ನಡ ಹಾಡನ್ನು ಔಪಚಾರಿಕವಾಗಿ ಯುಟ್ಯೂಬ್ ಜಾಲ ತಾಣದಲ್ಲಿ ಬಿಡುಗಡೆ ಮಾಡಲಾಯಿತು.

ಪಾಯಿಂಟ್ ಬ್ಲಾನ್ಕ್ ಕ್ರಿಯೆಷನ್ಸ್ ಮ್ಯೂನಿಕ್​ನ ರಾಘವ್ ನಾಯ್ಡು ಗೀತ ರಚನೆ ಮಾಡಿದರೆ, ನಿರ್ದೇಶನ ಮಾಡಿದ್ದು ವಿಶಾಲ್  ನೈಧೃವ್.  ರೋಹಿತ್ ಹಳ್ಳಿಖೇಡೆ ಹಾಗು ಸುನಿಧಿ ಗಣೇಶ್ ಅವರ ಸುಮಧುರ ಕಂಠದಲ್ಲಿ ಹಾಡಲಾಗಿದೆ. ರಾಕಿ ಸುರೇಶ್, ಅನಾಮಿಕ ಸ್ಟಾರ್ಕ್ ದತ್ತ, ಅಮೃತ ಮಂಡಲ್ ಅವರು ಅಭಿನಯಿಸಿದ್ದಾರೆ. ಬರ್ಲಿನ್​​ನ ಚೆಲಿ ನೃತ್ಯ ನಿರ್ದೇಶನ ಮಾಡಿದರೆ, ಕಾರ್ತಿಕೇಯ್ ಖಟ್ಟರ್ ಅವರ ಸಂಕಲನವಿದೆ. ತೇಜಸ್ ಅಹೋಬಲ ಹಾಗು ಆಲ್ಬರ್ಟ್ ಜೊಸ್ ಛಾಯಾಗ್ರಹಣ ಮಾಡಿದ್ದು, ಜರ್ಮನಿಯ ವಿವಿಧ ಸ್ಥಳಗಳಲ್ಲಿ ಮನಸೆಳೆಯುವ ರೀತಿಯಲ್ಲಿ ಚಿತ್ರೀಕರಿಸಿದ್ದಾರೆ. ಕಲಾವಿದರಿಗೆ ತಮ್ಮ ಕನಸುಗಳನ್ನು ಈ ರೀತಿಯಲ್ಲಿ ನನಸಾಗಿಸಕೊಳ್ಳಲು ಮ್ಯೂನಿಕ್​ನ ಸಿರಿಗನ್ನಡಕೂಟ ಪ್ರೋತ್ಸಾಹ ನೀಡಿದೆ.

ಪಾಯಿಂಟ್ ಬ್ಲಾನ್ಕ್ ಕ್ರಿಯೇಷನ್ಸ್ ಈ ಹಿಂದೆ ನಿನ್ನ ಗುಂಗಲ್ಲಿ ಶೀರ್ಷಿಕೆಯ ಹಾಡನ್ನು ಯುರೋಪ್​ನಲ್ಲಿ ಮರುಚಿತ್ರೀಕರಣ ಮಾಡಿ ಬಿಡುಗಡೆ ಮಾಡಿದ್ದರು. ಜರ್ಮನಿ ಸುತ್ತಮುತ್ತಲಿನ ಸ್ಥಳೀಯ ಕನ್ನಡ ಕಲಾವಿದರಿಗೆ ಪ್ರೋತ್ಸಾಹ ನೀಡಿ ಇನ್ನೂ ಹಾಡುಗಳನ್ನು ಚಿತ್ರೀಕರಿಸಿ, ಬಿಡುಗಡೆ ಮಾಡುವ ಧ್ಯೇಯ ಹೊತ್ತು ಪ್ರಾರಂಭಿಸಿದ ಈ ಸಂಸ್ಥೆ ಹೀಗೆ ಮುಂದುವರೆದು ಒಳ್ಳೆಯ ಹೆಸರು ಗಳಿಸಲಿ ಎಂದು ಆಗಮಿಸಿದ್ದ ಅತಿಥಿಗಳು ಶುಭ ಹಾರೈಸಿದರು.

ಸಂಪರ್ಕ  Email: Info@pointblankcreations.com

Insta: @pointblankcreations

ಗಾಯಕರು ಮತ್ತು ಸಂಗೀತ ಸಂಯೋಜಕ : ವಿಶಾಲ್ ನೈಧ್ರುವ್

ಗಾಯಕಿ: ಸುನಿಧಿ ಗಣೇಶ್
ಗಾಯಕರು : ರೋಹಿತ್ ಹಳ್ಳಿಖೇಡೆ