ನ್ಯೂಸ್

ಮೈಸೂರು ದಸರಾಗಿಂತ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಯಬೇಕು: ಹಾವೇರಿಯಲ್ಲಿ ಅಧಿಕಾರಿಗಳಿಗೆ ಸಚಿವ ಸೂಚನೆ

ಹಾವೇರಿ: ಮೈಸೂರು ದಸರಾಗಿಂತ ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಹಾವೇರಿ ಸಾಹಿತ್ಯ ಸಮ್ಮೇಳನ ನಡೆಯಬೇಕು ಎಂದು ಅಧಿಕಾರಿಗಳಿಗೆ ಸಚಿವ ಸುನಿಲ್​ ಕುಮಾರ್​ ಸೂಚಿಸಿದರು.

2022ರ ಜ.6ರಿಂದ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಕರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಸಮ್ಮೇಳನ ನಡೆದಿರಲಿಲ್ಲ. ಹಾಗಾಗಿ, ಸಹಜವಾಗಿಯೇ ಸಮ್ಮೇಳನ ಯಶಸ್ವಿಯಾಗಬೇಕು. ಅದಕ್ಕಾಗಿ ಎಲ್ಲ 18 ಉಪ ಸಮಿತಿಗಳು ಅಚ್ಚುಕಟ್ಟಾಗಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್​ ಹೆಬ್ಬಾರ ಮಾತನಾಡಿ, ಸಮ್ಮೇಳನ ಯಶಸ್ವಿಯಾಗಬೇಕಾದರೆ ಊಟ, ವಸತಿ ಮತ್ತು ಸಾರಿಗೆ ಸಮರ್ಪಕವಾಗಿ ಮಾಡಬೇಕು. ಹಾವೇರಿಯಲ್ಲಿ ಹೆಚ್ಚು ಹೋಟೆಲ್​ಗಳು ಇಲ್ಲ. ಹಾಗಾಗಿ ಹುಬ್ಬಳ್ಳಿ- ಧಾರವಾಡ, ದಾವಣಗೆರೆ ಹಾಗೂ ಗದಗ ಜಿಲ್ಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಬೇಕು. ಇದಕ್ಕೆ ಅಕ್ಕಪಕ್ಕದ ಜಿಲ್ಲೆಗಳ ಅಧಿಕಾರಿಗಳು, ಸಾರ್ವಜನಿಕರ ಸಹಕಾರ ಪಡೆದು ಸಮ್ಮೇಳನ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್​ ಜೋಶಿ, ಹೆಸ್ಕಾಂ ಎಂಡಿ ಭಾರತಿ, ಜಿಲ್ಲಾಧಿಕಾರಿ ರಘುನಂದನ್​ ಮೂರ್ತಿ, ಜಿಪಂ ಸಿಇಒ ಮಹ್ಮದ್​ ರೋಷನ್, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ್​ ಪೂಜಾರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಸಂಜೀವ್​ಕುಮಾರ್​ ನೀರಲಗಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.