ಚಂಡೀಗಢ: ಹರಿಯಾಣ ರಾಜ್ಯದ ಗುರುಗಾಂವ್ನಲ್ಲಿ ವಾಸವಾಗಿರುವ ಕನ್ನಡಿಗರು ‘ಗುರುಗಾಂವ್ ಕನ್ನಡ ಸಂಘವನ್ನು ಕಟ್ಟಿ’ ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯೋತ್ಸವ(Kannada Rajyotsava)ವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ಅದೇ ರೀತಿ ಈ ವರ್ಷ ಭಾನುವಾರ (ನವೆಂಬರ್ 17)ದಂದು ಗುರುಗಾಂವ್ ನಗರದ Excelsior American ಶಾಲೆಯ ಸಭಾಂಗಣದಲ್ಲಿ ಸುಮಾರು 320 ಕನ್ನಡಿಗರ ಮಧ್ಯೆ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಇದನ್ನು ಓದಿ: ಕತಾರಿನಲ್ಲಿ ಭಾರತೀಯರಿಂದ ಆಯುರ್ವೇದ ದಿನಾಚರಣೆ | Qatar
ತುಂಬಿದ ಸಭಾಂಗಣಕ್ಕೆ ಮುಖ್ಯ ಅತಿಥಿಗಳನ್ನು ಅಧ್ಯಕ್ಷರು ಶ್ರೀ ಕೃಷ್ಣಪ್ಪ ಎಂ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜೋಳದರಾಶಿ ಅವರು ಆದರದಿಂದ ಸ್ವಾಗತ ಮಾಡಿದರು. ಸಮಾರಂಭದಲ್ಲಿ ಮುಖ್ಯ ಆತಿಥಿಗಳಾಗಿ ಶ್ರೀ ಕೆ ಎಸ್ ಸೋಮಶೇಖರ್ ಸರ್-ಹೆಚ್ಚುವರಿ ಕಾರ್ಯದರ್ಶಿಗಳು ರಾಜ್ಯಸಭಾ, ನವದೆಹಲಿ ಹಾಗೂ ಕೆ.ಜಿ. ಶ್ರೀನಿವಾಸ IPS - ಜಂಟಿ ಕಾರ್ಯದರ್ಶಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತ ಸರ್ಕಾರ, ನವದೆಹಲಿ ಇವರು ಭಾಗವಹಿಸಿ ಕಾರ್ಯಕ್ರಮದ ಹಿರಿಮೆಯನ್ನು ಹೆಚ್ಚಿಸಿದರು. ಚಂದ್ರಶೇಖರ ಕೆ ಅವರು ಅತಿಥಿಗಳನ್ನು ಸ್ವಾಗತ ಭಾಷಣದ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಿದರು.
ಮುಖ್ಯ ಅತಿಥಿಗಳು ಮತ್ತು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸಿ.ಎಮ್. ನಾಗರಾಜ್ ಸರ್, ಶ್ರೀ ರಾಧಾಕೃಷ್ಣ ಸರ್, ಡಾ. ಕೆ.ಎಸ್.ಸೋಮಶೇಖರ್ ಸರ್ ಮತ್ತು ಡಾ. ಕೆ.ಜಿ.ಶ್ರೀನಿವಾಸ ಸರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷರು ಕೃಷ್ಣಪ್ಪ ಎಂ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜೋಳದರಾಶಿ ಅವರು ತಾಯಿ ಭುವನೇಶ್ವರಿ ಮಾತೆಯ ಫೋಟೋಗೆ ದೀಪ ಹಚ್ಚುವ ಮೂಲಕ ಅದ್ದೂರಿ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸಿ ಎಮ್ ನಾಗರಾಜ್ ಸರ್ ನೆರವೇರಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಸಿ.ಎಮ್.ನಾಗರಾಜ್ ಸರ್ ಅವರು IAS ಪರೀಕ್ಷೆ ಬರೆಯಲು ದೆಹಲಿಗೆ ಬರುವ ಕನ್ನಡಿಗರಿಗೆ ದೆಹಲಿ , ಗುರುಗಾಂವ್ ಅಥವಾ ನೋಯ್ಡಾದಲ್ಲಿ ಒಂದು ವಸತಿ ನಿಲಯ ಕಟ್ಟುವ ತಮ್ಮ ಭವಿಷ್ಯದ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು. ಕೆ.ಎಸ್ ಸೋಮಶೇಖರ್ ಸರ್ ಮಾತನಾಡಿ, ಯಾವ ತರಹ ಮೈಸೂರು ರಾಜ್ಯವು ಹರಿದು ಹಂಚಿಹೊಗಿತ್ತು, ಅದನ್ನು ಒಂದುಗೂಡಿಸಿದಾಗ ಬಳ್ಳಾರಿ ನಮಗೆ ಸಿಕ್ಕಿತು. ಅದೆ ತರಹ ಹೊಸೂರು, ಕೃಷ್ಣಗಿರಿ, ಕಾಸರಗೋಡು, ಸಾಂಗ್ಲಿ ಸೋಲಾಪುರ ಮುಂತಾದ ಜಿಲ್ಲೆಗಳನ್ನು ಕಳೆದುಕೊಂಡೆವು. ಅದರ ಜತೆ ಕನ್ನಡಿಗರು ಕಳೆದುಕೊಂಡ ಆತಿ ದೊಡ್ಡ ಅಸ್ತಿ ಎಂದರೆ ಅಕ್ಕಲಕೋಟೆ ಪ್ರದೇಶ. ಆ ಪ್ರದೇಶದಲ್ಲಿ ವಾಸಿಸುವ ಕನ್ನಡಿಗರ ಮನೋವೇದನೆ ವರ್ಣಿಸಲು ಸಾಧ್ಯವಿಲ್ಲ, ಹಾಗೆ ಅದನ್ನು ಕರ್ನಾಟಕಕ್ಕೆ ಸೇರಿಸಲು ಸಾಧ್ಯವಿಲ್ಲ. ಕೇರಳಿಗರು ಮತ್ತು ಮರಾಠಿಗರು ವ್ಯವಸ್ಥಿತವಾಗಿ ಕನ್ನಡ ಮಾತಾಡುವ ಪ್ರದೇಶಗಳಲ್ಲಿ ಕನ್ನಡವನ್ನು ನೆಲಸಮ ಮಾಡುತ್ತಾರೆ ಎನ್ನುವ ನೋವನ್ನು ಹಂಚಿಕೊಂಡರು.
ಇದೇ ಸಮಯದಲ್ಲಿ ದೆಹಲಿಯ ಸುತ್ತಮುತ್ತ ಇರುವ ಕನ್ನಡಿಗರು ಹೊಸ ಸಂಸತ್ತನ್ನು ನೋಡಬೇಕು ಎಂದು ಎನಿಸಿದರೆ ದೆಹಲಿ ಮತ್ತು ಗುರುಗಾಂವ್ ಕನ್ನಡ ಸಂಘಗಳ ಅಧ್ಯಕ್ಷರ ಜತೆ ಮಾತನಾಡಿ ಒಂದು ಲಿಸ್ಟನ್ನು ತಯಾರು ಮಾಡಿಕೊಟ್ಟರೆ ಅವರಿಗೆ ಸಂಸತ್ತನ್ನು ತೋರಿಸುತ್ತೇನೆ ಎಂದು ಭರವಸೆ ನೀಡಿದರು.
ಕೆ.ಜಿ. ಶ್ರೀನಿವಾಸ IPS ಅಧಿಕಾರಿ ಮಾತನಾಡಿ, ಹೊರರಾಜ್ಯಗಳಲ್ಲಿ ಇರುವ ಕನ್ನಡಿಗರು ಕನ್ನಡ ಸಂಘಗಳನ್ನು ಕಟ್ಟಿ ಕನ್ನಡವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಅತಿ ಉತ್ತಮವಾದ ಕೆಲಸ. ಅದೆ ತರಹ ತಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕು ಎಂದು ಹೇಳಿದರು. ತಮ್ಮ ಮಗನನ್ನು ಕನ್ನಡ ಕಲಿಯಲು ಕರ್ನಾಟಕದಲ್ಲಿ ಬಿಟ್ಟು, ಕಲಿತ ಬಳಿಕ ದೆಹಲಿಗೆ ಕರೆದುಕೊಂಡು ಬಂದ ಅವರ ಅನುಭವವನ್ನು ಹಂಚಿಕೊಂಡರು.
ದೆಹಲಿಯಲ್ಲಿ ಕನ್ನಡಿಗರಿಗೆ ಯಾವುದೇ ರೀತಿಯ ತೊಂದರೆ ಉಂಟಾದಾಗ ತುರ್ತು ಸಂಖ್ಯೆಗೆ ಯಾವ ರೀತಿ ದೂರವಾಣಿ ಕರೆ ಮಾಡಿ ಸಹಾಯ ಪಡೆಯಬೇಕು ಎನ್ನುವ ಮಾಹಿತಿ ಕೊಟ್ಟರು. ಅಲ್ಲದೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ ನಗರದಿಂದ ನೇರವಾಗಿ ಬೆಂಗಳೂರಿಗೆ ಯಾವ ತರಹ ವಿಮಾನ ಹಾರಾಟ ಶುರುಮಾಡಿದವು. ಅಂದು ವಾರಕ್ಕೊಮ್ಮೆ ಶುರು ಮಾಡಿದ ವಿಮಾನ ಹಾರಾಟ ಇಂದು ವಾರಕ್ಕೆ 19 ಸಲ ಹಾರಾಟವಾಗತ್ತದೆ ಎಂದು ತಿಳಿಸಿದರು.
ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷರು ಕೃಷ್ಣಪ್ಪ ಎಂ ಮಾತನಾಡುತ್ತಾ, ಕರ್ನಾಟಕದ ಉದಯ ಹೇಗಾಯಿತು, ಅದರ ಹಿಂದಿರುವ ಮಹಾನ್ ವ್ಯಕ್ತಿಗಳು ಮತ್ತು ಅವರ ಕೊಡುಗೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಸಮಾರಂಭದಲ್ಲಿ ಸ್ಥಳೀಯ ಮಕ್ಕಳು ಅದ್ಭುತವಾಗಿ ನೃತ್ಯ ಮಾಡಿದರು. ಪುರುಷ ಮತ್ತು ಮಹಿಳಾ ಗಾಯಕರು ಇಂಪಾಗಿ ಹಾಡನ್ನು ಹಾಡಿದರು. ಕಾರ್ಯಕ್ರಮದಲ್ಲಿ 10 ಮತ್ತು 12ನೇಯ ತರಗತಿಯಲ್ಲಿ 90% ಅಧಿಕ ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳನ್ನು, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳು ಸನ್ಮಾನಿಸಿದರು.
ಸಮಾರಂಭದಲ್ಲಿ ಕರ್ನಾಟಕದಿಂದ ಬಂದ ಜಾನಪದ ಝೇಂಕಾರ, ಸಿನಿಮಾ ಕ್ಷೇತ್ರದಲ್ಲಿ ಹಿನ್ನೆಲೆ ಗಾಯಕರಾಗಿ, ಜಾನಪದ ಜಂಗಮ ಎಂದು ಹೆಸರುವಾಸಿಯಾದ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಜೋಗಿಲಾ ಸಿದ್ಧರಾಜು ಮತ್ತು ತಂಡದಿಂದ ನೀಡಿದ ಜಾನಪದ ಕಾರ್ಯಕ್ರಮದ ಹಾಡುಗಳು ಅದ್ಬುತವಾಗಿದ್ದವು. ಹಾಗೂ ರಂಗವಿಜಯ ತಂಡ ಅರ್ಪಿಸಿದ ಝೀ ಕನ್ನಡ ಟಿವಿಯಲ್ಲಿ 2024 ಸೀಸನ್ 05 ರ ವಿಜೇತರಾಗಿ ಡ್ರಾಮ ಜೂನಿಯರ್ಸ್ನ ಕುಣಿಗಲ್ ವಿಷ್ಣು ಮತ್ತು ಲಿಖಿತ್ ಸಾಯಿ ಸಂಗಡಿಗರಿಂದ ತಂಡದಿಂದ ನೀಡಿದ ಹಾಸ್ಯದ ಕಾರ್ಯಕ್ರಮಗಳು ಅಮೋಘವಾಗಿದ್ದವು.
ಗುರುಗಾಂವ್ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜೋಳದರಾಶಿ ಸಭಾಂಗಣದಲ್ಲಿ ಸೇರಿದ ಪ್ರೇಕ್ಷಕರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ಈ ಕಾರ್ಯಕ್ರಮ ಯಶಸ್ವಿಯಾಗಲು ಗುರುಗಾಂವ್ ಕನ್ನಡ ಸಂಘದ ಖಜಾಂಚಿ ಮರಿಬಸಪ್ಪ ಎಂ., ಉಪಾಧ್ಯಕ್ಷರಾದ ರಾಜಕುಮಾರ ನಿಲೂರ, ಶ್ರೀಮತಿ ಮಾಲ ರಮೇಶ್ ಜಂಟಿ ಕಾರ್ಯದರ್ಶಿ ಲಕ್ಷ್ಮಣ ಕಟ್ಟಿಮನಿ ಹಾಗೂ ಸದಸ್ಯರಾದ ಗೋಪಾಲ ತಲ್ವಾರ್, ಶರಣಬಸಪ್ಪ, ರಾಜಶೇಖರ ಪಾಟೀಲ್, ಚಂದ್ರಶೇಖರ ಕೆ., ಗಿರೀಶ್ ಕುಲಕರ್ಣಿ, ಅಪ್ಪಸಾಬ್ ಗೋಟೆ ಶ್ರೀಮತಿ ಸುನಂದಾ ದರ್ಗಾ, ಶ್ರೀಮತಿ ಭಾರತಿ ತಿಮ್ಮಪ್ಪ ಶ್ರಮಿಸಿದರು.