| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು
‘ಒಲೆ ಹಚ್ಚಿದ ಮೇಲೆ ಹಸಿವಿರಬಾರದು, ಕೊಲೆ ಮಾಡಿದಮೇಲೆ ಸಾಕ್ಷಿ ಇರಬಾರದು’ ಅಂತ ಅಮಾಯಕರ ರಕ್ತ ಹರಿಸಿ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾನೆ ವೈರಮುಡಿ (ರವಿಶಂಕರ್). ಆತನಿಗೆ ಸವಾಲು ಹಾಕುವ ಸೂಪರ್ಹೀರೋ ಸ್ಟ್ರಾಂಗ್ವ್ಯಾನ್ (ಪ್ರಜ್ವಲ್) ‘ಗೊತ್ತಿಲ್ಲದೇ ಇರೋರು ಯಾರು ಅಂತಾರೆ, ಗೊತ್ತಿರೋರು ದೇವರು ಅಂತಾರೆ...’ ಅಂತ ಹೇಳಿಕೊಂಡೇ ವೈರಮುಡಿ ಮಟ್ಟ ಹಾಕಲು ಮುಂದಾಗುತ್ತಾನೆ. ‘ಹೆಣ್ಣುಮಗಳಾದರೆ ನಾನೇ ನನ್ನ ಕೈಯಾರೆ ಕೊಲ್ಲುತ್ತೇನೆ’ ಎನ್ನುವ ವೈರಮುಡಿ, ವಯಸ್ಸಾದಂತೆ ಆ ಹೆಣ್ಣುಮಗಳ ಆಸರೆಗಾಗಿ ಹುಡುಕಾಡತೊಡಗುತ್ತಾನೆ. ಮತ್ತೊಂದೆಡೆ ಸ್ಟ್ರಾಂಗ್ವ್ಯಾನ್ ಕೂಡ ವೈರಮುಡಿ ಮಗಳನ್ನು ಹುಡುಕುತ್ತಾ, ಮೂವರು ಹುಡುಗಿಯರೊಂದಿಗೆ ಪ್ರೀತಿಯಾಟ ಶುರುಹಚ್ಚಿಕೊಳ್ಳುತ್ತಾನೆ.
ಹಾಗಾದರೆ ವೈರಮುಡಿ ಮಗಳು ಯಾರು? ಸ್ಟ್ರಾಂಗ್ವ್ಯಾನ್ ಪ್ರೀತಿಸುವ ಆ ಮೂವರು ಹುಡುಗಿ ಯರಿಗೂ ವೈರ ಮುಡಿಗೆ ಏನಾದರೂ ಸಂಬಂಧವಿದೆಯಾ? ಸ್ಟ್ರಾಂಗ್ವ್ಯಾನ್ಗೂ, ವೈರಮುಡಿಗೂ ದ್ವೇಷ ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರವಿದೆ... ಪ್ರಜ್ವಲ್ ಮೂರು ಶೇಡ್ಗಳಲ್ಲಿ ಮಿಂಚಿದ್ದಾರೆ. ಅವರ ಜತೆ ನಾಯಕಿಯರಾಗಿ ಲೇಖಚಂದ್ರಾ, ರಾಜಶ್ರೀ ಪೊನ್ನಪ್ಪ ಹಾಗೂ ನಿಮಿಕಾ ರತ್ನಾಕರ್ ತಮ್ಮ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಕೋಟೆ ಪ್ರಭಾಕರ್, ಇಲ್ಲಿ ಸಣ್ಣಕ್ಕಿ ಸುಂದರನ ಪಾತ್ರದಲ್ಲಿ ನಗಿಸುತ್ತಾರೆ. ಸುಂದರನ ಮಗ ಬುಲ್ಲಿಯಾಗಿ ಅರಸು ಮಹರಾಜ್ ಕೂಡ ಅವರಿಗೆ ಜೊತೆಯಾಗಿದ್ದಾರೆ. ವೈರಮುಡಿ ರವಿಶಂಕರ್ ‘ಕೆಂಪೇಗೌಡ’ ಆಮುಗಂ ನೆನಪಿಸುತ್ತಾರೆ.
ಎಡಭುಜಕ್ಕೆ ಬುಲೆಟ್ ಹೊಕ್ಕಿದರೆ, ಬಲಭುಜಕ್ಕೆ ಬ್ಯಾಂಡೇಜ್ ಕಟ್ಟಿ ಪ್ರಯೋಜನವಿಲ್ಲ... ಇಂತಹ ತಪ್ಪುಗಳು ಇಂದಿನ ಬುದ್ದಿವಂತ ಪ್ರೇಕ್ಷಕನ ಕಣ್ತಪ್ಪಿಸಲಾರವು. ಕೆಲವೆಡೆ ಲಾಜಿಕ್ ಮಿಸ್ ಹೊಡೆದರೂ, ಅಲ್ಲಲ್ಲಿ ನಿಧಾನವೆನಿಸಿದರೂ ಕೊನೆವರೆಗೆ ಕುಳಿತರೆ ಒಂದೊಳ್ಳೆ ಕ್ಲೈಮ್ಯಾಕ್ಸ್ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಮ್ಾರಾಯಣ್. ರವಿಬಸ್ರೂರು ಅವರು ಸಂಗೀತದಲ್ಲಿ ಹಾಡುಗಳು ‘ಅಬ್ಬರ’ ಎನಿಸದಿದ್ದರೂ ಕೇಳುವಂತಿವೆ. ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಸಿನಿಮಾ ‘ಅಬ್ಬರ’ವೆನಿಸಬಹುದು.