ನ್ಯೂಸ್

ಬಾಲಿವುಡ್​ ಸಿಂಗರ್​ ಕನ್ನಿಕಾರನ್ನು ಬಿಡದೇ ಕಾಡುತ್ತಿರುವ ಕರೊನಾ: ಅಷ್ಟಕ್ಕೂ ಏನಾಗಿದೆ?

ಲಖನೌ: ಯಾಕೋ ಬಾಲಿವುಡ್​ ಪ್ರಖ್ಯಾತ ಸಿಂಗರ್​ ಕನ್ನಿಕಾ ಕಪೂರ್​ ಅವರನ್ನು ಕರೊನಾ ವೈರಸ್​ ಬಿಡುವಂತೆ ಕಾಣುತ್ತಿಲ್ಲ. ಈವರೆಗೂ ಎದುರಿಸಿದ ನಾಲ್ಕು ಪರೀಕ್ಷೆಗಳಲ್ಲೂ ಕನ್ನಿಕಾರಿಗೆ ಕರೊನಾ ಪಾಸಿಟಿವ್​ ಫಲಿತಾಂಶ ವರದಿಯಾಗಿರುವುದು ಕುಟುಂಬಕ್ಕೆ ಆಘಾತವಾಗಿದೆ.

ಮಾರ್ಚ್​ 9ರಂದು ಲಂಡನ್​ನಿಂದ ಮುಂಬೈಗೆ ಮರಳಿದ ಕನ್ನಿಕಾ ಕಾನ್ಪುರ ಮತ್ತು ಲಖನೌಗೆ ಪ್ರಯಾಣ ಬೆಳೆಸಿ ಮನೆಯಲ್ಲಿ ಉಳಿದಿದ್ದರು. ಅದಾದ ಕೆಲವೇ ದಿನಗಳಲ್ಲಿ ಕೆಮ್ಮು ಮತ್ತು ಜ್ವರ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಯಿತು. ಮಾರ್ಚ್​ 20ರಂದು ಆಸ್ಪತ್ರೆಗೆ ದಾಖಲಾದ ಕನ್ನಿಕಾರಿಗೆ ಕರೊನಾ ಸೋಂಕು ತಗುಲಿರುವುದು ದೃಢವಾಗಿತ್ತು.

ಇದಾದ ಬೆನ್ನಲ್ಲೇ ಲಂಡನ್​ನಿಂದ ಮರಳಿದ ಬಳಿಕ ಕ್ವಾರಂಟೈನ್​ನಲ್ಲಿ ಇರದೆ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗದುಕೊಂಡರು. ಅಲ್ಲದೆ, ಕರೊನಾ ನಿರ್ಲಕ್ಷಿಸಿದ್ದಕ್ಕೆ ಕನ್ನಿಕಾ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೂಚನೆಯಂತೆ ಪ್ರಕರಣ ಕೂಡ ದಾಖಲಾಯಿತು.

ಸದ್ಯ ಲಖನೌದಲ್ಲಿರುವ ಸಂಜಯ್​ ಗಾಂಧಿ ಪೋಸ್ಟ್​ ಗ್ರಾಜ್ಯುಯೇಟ್​ ಇನ್ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​(ಎಸ್​ಜಿಪಿಜಿಐಎಂಎಸ್​​) ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿ ಜತೆಯೂ ಕಿರಿಕ್​ ಮಾಡಿಕೊಂಡಿರುವ ಕನ್ನಿಕಾ ಟೀಕೆಗೆ ಗುರಿಯಾಗಿದ್ದರು. (ಏಜೆನ್ಸೀಸ್​)