ಮುಂಬೈ: ಬಾಲಿವುಡ್ ಪ್ರಖ್ಯಾತ ಗಾಯಕಿ ಕನ್ನಿಕಾ ಕಪೂರ್ ಅವರಿಗೆ ಕರೊನಾ ಸೋಂಕು ತಗುಲಿರುವುದಾಗಿ ವರದಿಯಾಗಿದೆ. ಈ ಮೂಲಕ ಕಿಲ್ಲರ್ ಕರೊನಾ ಸೋಂಕಿಗೆ ಗುರಿಯಾದ ಮೊದಲ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.
ಸೋಂಕಿನ ಬಗ್ಗೆ ಸ್ವತಃ ಕನ್ನಿಕಾ ಕಪೂರ್ ಅವರೇ ಇನ್ಸ್ಟಾಗ್ರಾಂನಲ್ಲಿ ಖಚಿತಪಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾನು ಜ್ವರದಿಂದ ಬಳಲುತ್ತಿದ್ದೆ. ಬಳಿಕ ಪರೀಕ್ಷೆಗೆ ಒಳಗಾದಾಗ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ. ಇದೀಗ ನಾನು ಮತ್ತು ನನ್ನ ಕುಟುಂಬ ಸಂಪೂರ್ಣ ಪ್ರತ್ಯೇಕವಾಗಿದ್ದು, ವೈದ್ಯಕೀಯ ಸಲಹೆಯನ್ನು ಅನುಸರಿಸುತ್ತಿದ್ದೇವೆ. ನಾನು ಸಂಪರ್ಕದಲ್ಲಿದ್ದ ಜನರ ಮ್ಯಾಪಿಂಗ್ ಸಹ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕಾಯಿಲೆಯ ಲಕ್ಷಣಗಳು ಇದ್ದರೆ ಪರೀಕ್ಷೆಗೆ ಒಳಗಾಗಿ ಮತ್ತು ಪ್ರತ್ಯೇಕವಾಗಿ ಜೀವಿಸಲು ಅಭ್ಯಾಸ ಮಾಡಿಕೊಳ್ಳಿ ಎಂದು ಈ ಸಮಯದಲ್ಲಿ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಮಾಮೂಲಿ ಜ್ವರದಂತೆ ನಾನೀಗ ಆರಾಮವಾಗಿದ್ದೇನೆ. ಯಾವುದೇ ವದಂತಿಗೆ ಕಿವಿಗೊಟ್ಟು ಭಯಭೀತರಾಗಬೇಡಿ. ಪರಿಣಿತ ವೈದ್ಯರ ಸಲಹ ಹಾಗೂ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲೆಂದು ಬಯಸುವುದಾಗಿ ಕನ್ನಿಕಾ ಕಪೂರ್ ಹೇಳಿದ್ದಾರೆ.
ಸದ್ಯ ಭಾರತದಲ್ಲಿ ಕರೊನಾ ಸೋಂಕಿತರ ಪ್ರಕರಣ 200ರ ಗಡಿ ದಾಟಿದ್ದು, ಓರ್ವ ಇಟಲಿಯನ್ ಪ್ರಜೇ ಸೇರಿದಂತೆ 5 ಮಂದಿ ಬಲಿಯಾಗಿದ್ದಾರೆ. (ಏಜೆನ್ಸೀಸ್)