ನವದೆಹಲಿ: ಸಿಖ್ಖರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಾಲಿಗೆ ಹರಿಬಿಟ್ಟಿದ್ದ ಬಾಲಿವುಡ್ ನಟಿ ಪದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್ ಅವರಿಗೆ ಶಾಂತಿ ಮತ್ತು ಸೌಹಾರ್ದತೆ ಕುರಿತ ದೆಹಲಿ ವಿಧಾನಸಭಾ ಸಮಿತಿಯು ಸಮನ್ಸ್ ಜಾರಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ ನಂತರ ಕಂಗನಾ, ಇನ್ಸ್ಟಾಗ್ರಾಂನಲ್ಲಿ ಅಸಮಾಧಾನ ಹೊರಹಾಕಿದ್ದರು. ರೈತ ಪ್ರತಿಭಟನಾಕಾರರ ಬಗ್ಗೆ ಮಾತಾಡುತ್ತಾ 'ಖಾಲಿಸ್ತಾನಿ ಭಯೋತ್ಪಾದಕರು' ಎಂದು ಕರೆದಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಛಡ್ಡ ನೇತೃತ್ವದ ದೆಹಲಿ ವಿಧಾನಸಭಾ ಸಮಿತಿಯು ಡಿಸೆಂಬರ್ 6 ರಂದು ಕಂಗನಾಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ ಎಂದು ಎಎನ್ಐ ವರದಿ ತಿಳಿಸಿದೆ. (ಏಜೆನ್ಸೀಸ್)