ಮುಂಬೈ: ಇತ್ತೀಚಿನ ದಿನಗಳಲ್ಲಿ ಹಲವಾರು ಕಾಂಟ್ರವರ್ಸಿಗಳ ಮೂಲಕ ಸುದ್ದಿಯಾಗುತ್ತಿರುವ ನಟಿ ಕಂಗನಾ ರಣಾವತ್ ಇದೀಗ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನೂ ಬಾಲಿವುಡ್ಗೆ ಕರೆತಂದಿದ್ದಾರೆ. ಬಾಲಿವುಡ್ನ ಪ್ರಸಿದ್ಧ ಸಿನಿಮಾ ಗಜನಿಯಲ್ಲಿ ಅಮಿರ್ ಖಾನ್ ಪಾತ್ರಕ್ಕೂ, ಅಧ್ಯಕ್ಷ ಜೋ ಬಿಡೆನ್ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಜಯಭೇರಿ ಬಾರಿಸಿದ್ದಾರೆ. ಇವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ, ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿನ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಭಾರತದಲ್ಲಿ ಭಾರಿ ಪ್ರಮಾಣದ ಪರ, ವಿರೋಧ ಮಾತುಗಳು ಕೇಳಿಬಂದಿವೆ. ಕಮಲಾ ಬಗ್ಗೆ ಬಹುತೇಕರು ಸಂತಸ ವ್ಯಕ್ತಪಡಿಸಿದ್ದರೆ, ಟ್ರಂಪ್ ಅಭಿಮಾನಿಗಳು ಬಿಡೆನ್ ಗೆದ್ದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಹಾದಿಯಲ್ಲಿ ನಟಿ ಕಂಗನಾ ಕೂಡ, ಬಿಡೆನ್ ಅವರನ್ನು ಹೀಯಾಳಿಸಿ, ಕಮಲಾ ಅವರನ್ನು ಹೊಗಳಿದ್ದಾರೆ.
ಜೋ ಬಿಡೆನ್ ಗಜನಿ ಇದ್ದಂತೆ. ಅವರು ಪ್ರತಿ ಐದು ನಿಮಿಷಕ್ಕೆ ಎಲ್ಲವನ್ನೂ ಮರೆತುಬಿಡುತ್ತಾರೆ. ಅವರಿಗೆ ವರ್ಷಕ್ಕಿಂತ ಹೆಚ್ಚು ಕಾಲ ನೆನಪುಗಳು ಉಳಿಯುವುದು ಖಚಿತವಿಲ್ಲ. ಆದರೆ ಕಮಲಾ ಹ್ಯಾರಿಸ್ ಸ್ಪಷ್ಟವಾಗಿ ಅಧಿಕಾರವನ್ನು ನಡೆಸುತ್ತಾರೆ. ಒಬ್ಬ ಮಹಿಳೆ ಮೇಲೇರಿದರೆ ಆಕೆ ಬೇರೆಲ್ಲ ಮಹಿಳೆಯರಿಗೂ ದಾರಿ ಮಾಡಿಕೊಡುತ್ತಾಳೆ ಎಂದು ಕಂಗನಾ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಅದರ ಜತೆಯಲ್ಲಿ ಕಮಲಾ ಹ್ಯಾರಿಸ್ ಅವರ ಭಾಷಣದ ತುಣುಕನ್ನೂ ಕಂಗನಾ ಹಂಚಿಕೊಂಡಿದ್ದಾರೆ. ಕಂಗನಾ ಅವರ ಈ ಹೋಲಿಕೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)