ನ್ಯೂಸ್

ಹೊಸ ವರ್ಷಕ್ಕೆ 13 ಭಾಷೆಗಳಲ್ಲಿ ಕನಕ ಸಾಹಿತ್ಯ ಲೋಕಾರ್ಪಣೆ

ಬೆಂಗಳೂರು: ನಾಡಿನ ಶ್ರೇಷ್ಠ ಹಾಗೂ ಹಿರಿಯ ಸಂತ ಕನಕದಾಸರ ಬದುಕು ಮತ್ತು ಬರಹವನ್ನು ವಿಶ್ವಾದ್ಯಂತ ಪ್ರಚಾರ ಮಾಡುವ ಉದ್ದೇಶದೊಂದಿಗೆ ಅವರ ಕೃತಿಗಳನ್ನು ದಕ್ಷಿಣ ಭಾರತದ ಎಲ್ಲ ಭಾಷೆಗಳು ಸೇರಿ ದೇಶದ 13 ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವ ಮಹತ್ವದ ಯೋಜನೆಯನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕೈಗೆತ್ತಿಕೊಂಡಿದೆ. ಸದ್ಯ ಪ್ರಗತಿಯಲ್ಲಿರುವ ಈ ಮಹತ್ಕಾರ್ಯವು ಮುಂಬರುವ ಜನವರಿ ಅಂತ್ಯದೊಳಗೆ ಪೂರ್ಣಗೊಂಡು ಲೋಕಾರ್ಪಣೆ ಸಿದ್ಧವಾಗಲಿದೆ.

ಮನುಷ್ಯ ಕುಲಕ್ಕೆ ಮಾನವೀಯತೆ ಮೌಲ್ಯಗಳನ್ನು ನೀಡಿರುವ ಹಲವು ಮಹನೀಯರಲ್ಲಿ ಕನಕದಾಸರು ಮುಂಚೂಣಿಯಲ್ಲಿದ್ದಾರೆ. ‘ಕುಲ ಕುಲವೆಂದು ಹೊಡೆದಾಡದಿರಿ...’ ಎಂಬ ಸಾರ್ವಕಾಲಿಕ ಸತ್ಯವನ್ನು ಬಿಟ್ಟುಹೋಗಿರುವ ಈ ಸಂತಶ್ರೇಷ್ಠನ ಬದುಕು, ಬರಹವು ಜನರಲ್ಲಿ ಭಾವೈಕ್ಯದ ಬೆಸುಗೆ ಮೂಡಿಸಿದೆ. ಈ ಸಾಧನೆಯನ್ನು ದೇಶದ ಇತರ ಭಾಷೆಯ ಜನರಿಗೂ ತಲುಪಿಸಲು ರಾಜ್ಯ ಸರ್ಕಾರ ಯೋಜನೆ ಜಾರಿಗೆ ಅನುಮತಿ ನೀಡಿದೆ. ಇದರಿಂದಾಗಿ ಕನಕದಾಸರ ಜೀವನ, ಸಂದೇಶ ಮತ್ತು ಸಾಹಿತ್ಯ ಕುರಿತಾದ ಅಧ್ಯಯನ, ಸಂಶೋಧನೆ, ಪ್ರಕಟಣೆ ಹಾಗೂ ಪ್ರಸಾರ ಕಾರ್ಯದ ಮೂಲಕ ಸಂತಶ್ರೇಷ್ಠನ ವಿಚಾಧಾರೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರಪಡಿಸುವ ಕಾರ್ಯ ಹಾಗೂ ಇನ್ನಿತರ ಕೆಲಸಗಳ ಬಗ್ಗೆ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ‘ವಿಜಯವಾಣಿ’ ಸಂವಾದದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈಗಾಗಲೇ ಅನುವಾದ ಕಾರ್ಯ ನಾಲ್ಕು ಭಾಷೆಗಳಲ್ಲಿ ಕೃತಿಗಳು ಸಿದ್ಧಗೊಂಡಿವೆ. ಉಳಿದವು ಅಂತಿಮ ಹಂತದಲ್ಲಿದ್ದು, ಮುಂದಿನ ವರ್ಷ ಜನವರಿಯಲ್ಲಿ ಬಾಕಿ ಕೆಲಸ ಪೂರ್ಣಗೊಳಿಸಿದ ಬೆನ್ನಲ್ಲೇ ಲೋಕರ್ಪಣೆ ಮಾಡುವ ಉದ್ದೇಶ ಇದೆ. ಜತೆಗೆ ಈ ಹಿಂದೆ ನಿರ್ಧರಿಸಿದ್ದಂತೆ ಇಂಗ್ಲಿಷ್ ಹಾಗೂ ಅಸ್ಸಾಮಿ ಭಾಷೆಗೂ ಕನಕದಾಸರನ್ನು ಪರಿಚಯಿಸುವ ಆಲೋಚನೆ ಇದೆ ಎಂದರು.

ಕನಕ ಚಿತ್ರಕಲಾ ಶಿಬಿರ: ಕನಕದಾಸರ ಕಾವ್ಯ ದರ್ಶನ ಮತ್ತು ಸಾಮಾಜಿಕ ಆಶಯಗಳ ಕುರಿತು ಚಿತ್ರ ಕಲಾವಿದರು ಕುಂಚದ ಮೂಲಕ ಪ್ರತಿಬಿಂಬಿಸಿರುವ ಬಗೆಯನ್ನು ದೃಶ್ಯ ಮಾಧ್ಯಮದಲ್ಲಿ ಪ್ರಚುರಪಡಿಸುವ ಉದ್ದೇಶದಿಂದ ಕನಕ ಚಿತ್ರಕಲಾ ಶಿಬಿರ ಆಯೋಜಿಸಲಾಗಿದೆ. ಇದಕ್ಕಾಗಿ ಆಸಕ್ತ ಕಲಾವಿದರನ್ನು ಆಹ್ವಾನಿಸಿ ಬೆಂಗಳೂರು ಮತ್ತು ಕಾಗಿನೆಲೆಯಲ್ಲಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಅಲ್ಲಿ ಕಲಾವಿದರು ಬಿಡಿಸಿದ ಕ್ಯಾನ್ವಾಸ್​ಗಳನ್ನು ಕೇಂದ್ರದ ಆವರಣದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಕಾ.ತ. ಚಿಕ್ಕಣ್ಣ ತಿಳಿಸಿದರು. ಮುಖ್ಯವಾಗಿ ನಮ್ಮ ಕೇಂದ್ರವು ಯುವಜನತೆ, ಸಾರ್ವಜನಿಕರು ಹಾಗೂ ವಿದ್ವಾಂಸರು - ಈ ಮೂರೂ ವಿಭಾಗಗಳಲ್ಲಿ ಕೆಲಸ ಮಾಡಲಿದೆ. ಕನಕರ ಕುರಿತು ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ‘ಜನಪ್ರಿಯ ವಾಚಿಕೆ’ ಹೆಸರಿನಲ್ಲಿ ಕಿರು ಪುಸ್ತಕಗಳನ್ನು ಹೊರತರಲಿದೆ. ಸರ್ಕಾರದ ವಿವಿಧ ಅಕಾಡೆಮಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಘ-ಸಂಸ್ಥೆಗಳ ಸಹಕಾರ ಪಡೆಯುವ ಯತ್ನವೂ ನಡೆದಿದೆ ಎಂದು ವಿವರಿಸಿದರು.

ಡಿಜಿಟಲ್ ದಾಖಲೀಕರಣ: ನಮ್ಮ ಸಂಶೋಧನಾ ಕೇಂದ್ರವು ಕೇವಲ ಕನಕ ದಾಸರಿಗೆ ಸೀಮಿತವಾಗದೆ ಪುರಂದರದಾಸರನ್ನು ಒಳಗೊಂಡಂತೆ ಕೀರ್ತನೆಗಳು, ತತ್ವಪದಗಳು, ಸೂಫಿ ಪದಗಳು, ಭಕ್ತಿ ಸಂಗೀತ ಸೇರಿ ಎಲ್ಲ ಬಗೆಯ ಭಕ್ತಿ ಪ್ರಾಕಾರಗಳ ಕುರಿತು ಕಾರ್ಯ ನಿರ್ವಹಿಸುತ್ತಿದೆ. ತತ್ವಪದಗಳನ್ನು ಮೂಲ ಸ್ವರೂಪದಲ್ಲಿಯೇ ಡಿಜಿಟಲ್ ಮಾಧ್ಯಮ ದಲ್ಲಿ ದಾಖಲೀಕರಣ ಮಾಡಲಾಗುತ್ತದೆ. ಇದಲ್ಲದೆ, ಕನಕದಾಸರ ಕೃತಿಗಳನ್ನು ಕನ್ನಡ, ಇತರ ಭಾಷೆಗಳ ಮೂಲಕ ದೃಶ್ಯ ಮಾಧ್ಯಮಗಳಲ್ಲಿ (ಯುಟ್ಯೂಬ್ ಚಾನಲ್) ಸಿದ್ಧಪಡಿಸಿ ಪ್ರಸಾರ ಕಾರ್ಯಕ್ಕೂ ಕೇಂದ್ರ ಮುಂದಾಗಿದೆ.

ಕನಕ ಕಾವ್ಯ-ನೃತ್ಯ: ಕನಕದಾಸರನ್ನು ವಿಭಿನ್ನ ಮಾಧ್ಯಮ ಗಳಲ್ಲಿ ಪ್ರಚುರಪಡಿಸಿ ಪ್ರಸಾರ ಮಾಡುವುದು ಕೇಂದ್ರದ ಆಶಯಗಳಲ್ಲಿ ಒಂದೆನಿಸಿದೆ. ಈ ನಿಟ್ಟಿನಲ್ಲಿ ಕನಕ ಕೀರ್ತನೆಗಳ ಆಧಾರಿತ ನೃತ್ಯ ರೂಪಕ ಹಾಗೂ ಕನಕ ಗೊಂಬೆಯಾಟ ಸಿದ್ಧಪಡಿಸಿ ಪ್ರದರ್ಶನ ನೀಡಲಾಗುತ್ತಿದೆ. ನಾಟಕಗಳನ್ನು ಕನಕದಾಸರನ್ನು ಪರಿಚಯಿಸಲು ಈಗಾಗಲೇ ಹೊಸ ಮಾದರಿಯಲ್ಲಿ 12 ನಾಟಕಗಳ ರಚನೆಯನ್ನೂ ಮಾಡಲಾಗಿದೆ. ಯಕ್ಷಗಾನ ಸೇರಿ ಬೇರೆ ಬೇರೆ ಕಲಾ ಪ್ರಕಾರ ಗಳಲ್ಲೂ ಕನಕರನ್ನು ಪರಿಚಯಿಸುವ ಕಾರ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಅಧ್ಯಯನಕ್ಕೆ ಪ್ರತ್ಯೇಕ ಗ್ರಂಥಾಲಯ: ಬೆಂಗಳೂರಿನ ಕಲಾಗ್ರಾಮದಲ್ಲಿರುವ ಕೇಂದ್ರದಲ್ಲಿ ವಿಶೇಷ ಹಾಗೂ ಸುಸಜ್ಜಿತ ಗ್ರಂಥಾಲಯ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕನಕದಾಸ, ಪುರಂದರದಾಸ ಸೇರಿ ಹರಿದಾಸರ ಕೀರ್ತನೆಗಳು, ಸೂಫಿ ಸಂತರ ತತ್ವಪದಗಳು, ಭಕ್ತಿ ಸಾಹಿತ್ಯ ಸೇರಿ ಹಲವು ಪ್ರಕಾರಗಳ ಪುಸ್ತಕಗಳು ಇರಲಿವೆ. ಜತೆಗೆ ಪತ್ರಿಕೆಗಳು, ಛಾಯಾಚಿತ್ರಗಳು, ಮೈಕ್ರೋ ಫಿಲಂ, ಧ್ವನಿಮುದ್ರಣ ಸಲಕರಣೆಗಳನ್ನು ಉಳ್ಳ ಆಕರ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು. ಅಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಭಿಮಾನಿಗಳಿಗೆ ಪರಾಮರ್ಶನ ಕಾರ್ಯಕ್ಕೆ ಪ್ರತ್ಯೇಕವಾಗಿ ಸುಸಜ್ಜಿತ ಅಧ್ಯಯನ ಕೇಂದ್ರದ ವ್ಯವಸ್ಥೆ ಮಾಡಲಾಗುತ್ತದೆ.

ಇತರ ಯೋಜನೆಗಳು: ಕನಕದಾಸರ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೊಡುಗೆಗಳನ್ನು ಅಕಾಡೆಮಿಕ್ ಹಾಗೂ ಸಾರ್ವಜನಿಕ ವಲಯಗಳಲ್ಲಿ ಹೆಚ್ಚು ಪ್ರಚಾರಕ್ಕೆ ತರಲು ಕನ್ನಡ ಹಾಗೂ ವಿವಿಧ ಭಾಷೆಗಳಲ್ಲಿ ವಿಶೇಷ ಉಪನ್ಯಾಸ, ಸಮ್ಮೇಳನ, ಸಭೆ, ವಿಚಾರ ಸಂಕಿರಣ, ಸಂವಾದ ಏರ್ಪಡಿಸಲಾಗುತ್ತದೆ. ಹೊರರಾಜ್ಯ, ವಿದೇಶಗಳಿಗೆ ಕರ್ನಾಟಕದ ವಿದ್ವಾಂಸರನ್ನು ಕಳುಹಿಸುವ ಜತೆಗೆ ಅಲ್ಲಿಂದಲೂ ನಮ್ಮಲ್ಲಿಗೆ ಆಹ್ವಾನಿಸಿ ಸಮ್ಮೇಳನ, ಗೋಷ್ಠಿಗಳನ್ನು ಆಯೋಜಿಸಲಾಗುವುದು. ಇದರ ಜತೆಗೆ ಕನಕದಾಸರ ಕೃತಿಗಳ ಅಧ್ಯಯನ ಕಾರ್ಯದಲ್ಲಿ ಯುವಜನರನ್ನು ತೊಡಗಿಸಲು ಕಾವ್ಯ, ಲೇಖನ, ಸಂಗೀತ, ನೃತ್ಯ, ಲಲಿತಕಲಾ ಶಿಬಿರ, ಕಮ್ಮಟ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಆಲೋಚನೆ ಕೇಂದ್ರದ ಮುಂದಿದೆ ಎಂದು ಕಾ.ತ. ಚಿಕ್ಕಣ್ಣ ತಿಳಿಸಿದರು.