ಹೈದರಾಬಾದ್: ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಭಾರಿ ಮಳೆಗೆ ಸುಮಾರು 19 ಮಂದಿ ಸಾವಿಗೀಡಾಗಿದ್ದು, 17 ಸಾವಿರಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇಂದು ಕೂಡ ವರುಣನ ಅಬ್ಬರ ಮುಂದುವರಿದಿದ್ದು, ರಾಜ್ಯದ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಹವಾಮಾನ ವೈಪರೀತ್ಯ ಹಿನ್ನಲೆ ರೈಲು, ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಳೆದ ಎರಡು ದಿನಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಧಾರಾಕಾರ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ತೆಲುಗು ರಾಜ್ಯ ಸರ್ಕಾರಗಳು ಸೋಮವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿತ್ತು. ಇದೀಗ ಮಂಗಳವಾರವೂ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ. ಜಿಲ್ಲೆಯ ಹಲವು ಪ್ರದೇಶಗಳು ಮಳೆಯ ಅನಾಹುತಕ್ಕೆ ತುತ್ತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಆಂಧ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವರು ಮಳೆಯ ಆರ್ಭಟಕ್ಕೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಈ ಕಾರಣ ಪ್ರಭಾಸ್ ಅಭಿನಯದ 'ಕಲ್ಕಿ' ಚಿತ್ರತಂಡ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಸಹಾಯಹಸ್ತ ನೀಡಿದೆ. ಇತ್ತೀಚೆಗಷ್ಟೇ ಟಾಲಿವುಡ್ ಬ್ಲಾಕ್ಬಸ್ಟರ್ ಸಾಲುಗೆ ಸೇರ್ಪಡೆಗೊಂಡ 'ಕಲ್ಕಿ 2898 ಎಡಿ' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡಿದ್ದು, ನಿರೀಕ್ಷೆಗೂ ಮೀರಿದ ಆದಾಯ ನೋಡಿತು. ಇದು ಚಿತ್ರದ ಯಶಸ್ಸಿಗೆ ದೊಡ್ಡ ಕಾರಣವಾಯಿತು.
ಇನ್ನು ಸಿನಿಮಾ ಗೆಲಿಸಿಕೊಟ್ಟ ಜನತೆ ಇದೀಗ ಪ್ರಕೃತಿ ವಿಕೋಪಕ್ಕೆ ಸಿಲುಕಿ ಪರದಾಡುತ್ತಿರುವ ಹಿನ್ನಲೆ ಮುಖ್ಯಮಂತ್ರಿಗಳ ನಿಧಿಗೆ ಚಿತ್ರದ ನಿರ್ಮಾಪಕರು 25 ಲಕ್ಷ ರೂ. ಹಣವನ್ನು ಚಿತ್ರತಂಡದ ಪರವಾಗಿ ದೇಣಿಗೆ ಕೊಟ್ಟಿದ್ದಾರೆ. ಚಿತ್ರ ತಯಾರಕರ ಈ ನಡೆಗೆ ಜಾಲತಾಣಗಳಲ್ಲಿ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಗೆಳು ಹರಿದುಬರುತ್ತಿದೆ,(ಏಜೆನ್ಸೀಸ್).