ಆಂಧ್ರಪ್ರದೇಶ: ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ನಾಗ್ ಅಶ್ವಿನ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಸೈನ್ಸ್-ಫಿಕ್ಷನ್ ಆಧರಿತ ಪ್ಯಾನ್ ಇಂಡಿಯಾ 'ಕಲ್ಕಿ 2898 AD' ಸಿನಿಮಾ ಸದ್ಯ ಬಿಡುಗಡೆಗೂ ಮುನ್ನ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಚಿತ್ರ ಮೇ 09, 2024ರಂದು ತೆರೆಗೆ ಬರಲು ಸಜ್ಜಾಗಿದೆ.
ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ಚಿತ್ರವು ಭಾರತೀಯ ಪುರಾಣಗಳಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ ಎಂಬ ಊಹಾಪೋಹಗಳು ಹರಿದಾಡಿವೆ. ಇದೆಲ್ಲದರ ನಡುವೆ ಇತ್ತೀಚಿನ ಸಂದರ್ಶನವೊಂದರಲ್ಲಿ, ಚಿತ್ರದ ಡೈಲಾಗ್ ರೈಟರ್ ಆದ ಸಾಯಿ ಮಾಧವ್ ಬುರ್ರಾ ಮಾತನಾಡಿ, "ಕಲ್ಕಿ 2898 AD' ಸಿನಿಮಾವು ಇಲ್ಲಿಯವರೆಗೆ ಟಾಲಿವುಡ್‌ನಲ್ಲಿ ಮಾತ್ರ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲಿ ಬಂದಿಲ್ಲ. ಭಾರತೀಯ ಚಿತ್ರರಂಗದಲ್ಲಿ ಚಿತ್ರದ ಪ್ರಕಾರವನ್ನು ಹಿಂದೆಂದೂ ಅನ್ವೇಷಿಸಲಾಗಿಲ್ಲ" ಎಂದು ಹೇಳಿದ್ದಾರೆ.
"ಇದು ನೆಕ್ಟ್ ಲೆವೆಲ್ ಸಿನಿಮಾ. ಹಾಲಿವುಡ್ ಸಿನಿಮಾ ನೋಡಿದ ಅನುಭವವಾಗುತ್ತೆ. ತೆಲುಗು ಅಥವಾ ಭಾರತೀಯ ಸಿನಿಮಾ ನೋಡುತ್ತಿದ್ದೇವೆ ಎಂದು ನಿಮಗೆ ಅನಿಸುವುದಿಲ್ಲ. 'RC15' ಕೂಡ ಇದೇ ರೀತಿಯ ಒಂದು ದೊಡ್ಡ ಯೋಜನೆಯಾಗಿದೆ. ಇಂತಹ ಒಳ್ಳೆಯ ಪ್ರಾಜೆಕ್ಟ್ಗಳ ಭಾಗವಾಗಿದ್ದೇನೆ ಎಂದು ನನಗೆ ಬಹಳ ಖುಷಿಯಿದೆ" ಎಂದು ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮುಂತಾದವರ ತಾರಾಗಣವಿದೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).