ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ? |
ಇತರರೊಳು ವಿಷಪರೀಕ್ಷೆಗೆ ನಿಲುವರಾರು? ||
ಮಿತಕುಕ್ಷಿ ಮಿತಭುಕ್ತ ; ಮತ್ತಾರ್ ಜಿತೇಂದ್ರಿಯನು? |
ಅತಿಚರ್ಚೆ ಸಲದಲ್ಲಿ - ಮಂಕುತಿಮ್ಮ ||
‘ಹುಟ್ಟಿನಿಂದಲೇ ಇಂದ್ರಿಯವಾಂಛೆಗಳು ಸತ್ತಿರುವವನದು ಅತಿಶಯ ಭಾಗ್ಯವಲ್ಲವೇ? ಇತರರೊಳಗೆ ವಿಷ ಪರೀಕ್ಷೆಗೆ ನಿಲ್ಲುವವರು ಯಾರಿದ್ದಾರೆ? ಯಾಕೆಂದರೆ ಜಿತೇಂದ್ರಿಯನೆಂದರೆ ಯಾರು? ಮಿತವಾದ ಹಸಿವುಳ್ಳವನೋ? ಅಥವಾ ಮಿತವಾಗಿ ತಿನ್ನುವವನೋ? ಈ ವಿಚಾರದಲ್ಲಿ ಅತಿಯಾದ ಚರ್ಚೆ ಸಲ್ಲದು’ ಎನ್ನುತ್ತದೆ ಈ ಕಗ್ಗ.
ಪಂಚೇಂದ್ರಿಯಗಳ ಮೂಲಕವೇ ಜಗತ್ತಿನ ಪರಿಚಯವಾಗುತ್ತದೆ, ಸೌಂದರ್ಯಗ್ರಹಣಕ್ಕೆ, ಸೂಕ್ಷ್ಮ ಸಂವೇದನೆಗಳಿಗೆ ಇಂದ್ರಿಯಗಳು ಬೇಕು. ಜತೆಗೆ ಅವುಗಳ ಮೇಲೆ ನಿಯಂತ್ರಣವನ್ನು ಸಾಧಿಸಬೇಕು. ಕುದುರೆಯು ಹೇಗೇಗೋ ಓಡುತ್ತದೆ ಎಂದು ಅದನ್ನು ಏರದೆ ಇರುವುದಲ್ಲ, ಕುದುರೆಯೇರಿ ಕಡಿವಾಣವನ್ನು ಬಿಗಿದು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವಿರಬೇಕು. ಅಂತರಂಗಕ್ಕೆ ಈ ಶಕ್ತಿ ಇದ್ದರೆ ಆ ಜೀವವು ಜಿತೇಂದ್ರಿಯವಾಗುತ್ತದೆ. ಮನಸ್ಸು ಆಸ್ವಾದನೆಯ ಸುಖವನ್ನು ಬಯಸಿರುತ್ತದೆ. ಅನುಕೂಲವಿದ್ದರೆ ನಿರ್ಧಾರ ಬದಲಾಗುವ ಸಾಧ್ಯತೆಯೂ ಇರುತ್ತದೆ. ಆರೋಗ್ಯವಿದ್ದರೂ ತನ್ನ ಮಿತಿಯನ್ನು ಮೀರಿ ಸೇವಿಸದೆ ಇರುವ ಮನೋನಿಗ್ರಹವೇ ನಿಜವಾದ ಜಿತೇಂದ್ರಿಯತ್ವ. ಮನಸ್ಸನ್ನು ಇಂದ್ರಿಯಗಳ ಆಕರ್ಷಣೆಗೆ ಬಲಿ ಬೀಳದಂತೆ ಕಾಪಾಡಿಕೊಳ್ಳುವ ಆತ್ಮಬಲವಿರುವವರು ತೀರ ವಿರಳ. ಪ್ರಕೃತಿ ಒಡ್ಡುವ ಆಕರ್ಷಣೆಗಳು ವಿಷದಂತೆಯೇ. ವಿಷಯಾಸಕ್ತಿಯನ್ನು ಕೆರಳಿಸಿ ಸಂಯಮ ಮೀರುವಂತೆ ಮನಸ್ಸನ್ನು ಮರುಳುಗೊಳಿಸುತ್ತವೆ. ಸಂಕಲ್ಪ ಮಾಡುವುದಕ್ಕಿಂತ ಅದನ್ನು ನಿಭಾಯಿಸುವುದು ಕಷ್ಟ. ಆದುದರಿಂದ ಜಿತೇಂದ್ರಿಯ ಯಾರು ಎಂದು ರ್ಚಚಿಸಿ ನಿರ್ಧರಿಸುವುದು ಸುಲಭವಲ್ಲ. ಅದು ಒಣ ಚರ್ಚೆಯಾಗಿಯಷ್ಟೇ ಉಳಿದೀತು. ಜೀವನಯಾತ್ರೆಯು ಸುಸೂತ್ರವಾಗಿ ಸಾಗಲು ದೈವಿಕ ನೆರವೂ ಬೇಕು, ಪುರುಷಪ್ರಯತ್ನವೂ ಇರಬೇಕು. ಮಿತ ಹಸಿವು ದೈವಕೃಪೆಯಾದರೆ, ಮಿತ ಸೇವನೆ ಪುರುಷಪ್ರಯತ್ನ. ಮನಸ್ಸನ್ನು ಅಂತರಂಗದ ಕಡೆಗೆ ತಿರುಗಿಸಿ ತನ್ನ ತಾನರಿಯುವ ಪ್ರಯತ್ನಕ್ಕಿಳಿದರೆ ಜೀವನಯಾನ ನಿರಾತಂಕವಾಗಿ ಗುರಿ ಸೇರಬಹುದು.