ಘೊರವನು ಮೋಹವನು ದೇವತೆಗಳಾಗಿಪರು |
ಭೀರು ಯಾಚಕರಾಸ್ಥೆ ತಪ್ಪದಿರಲೆಂದು ||
ಆರಿಂದಲೇಂ ಭೀತಿ, ಏಂ ಬಂದೊಡದ ಕೊಳುವ |
ಪಾರಮಾರ್ಥಿಕನಿಗೆಲೊ? - ಮಂಕುತಿಮ್ಮ ||
‘ಮನುಷ್ಯರಿಗೆ ಭಯ, ಯಾಚಕಾವಸ್ಥೆ ತಪ್ಪದಿರಲೆಂದು ದೇವತೆಗಳು ಘೊರ ಮತ್ತು ಮೋಹವನ್ನಾಗಿಸುತ್ತಾರೆ. ಯಾರಿಂದ ಏನು ಭಯ? ಏನು ಬಂದರೂ ಸ್ವೀಕರಿಸೋಣ ಎಂಬಂತೆ ಬಾಳುವವನಿಗೆ ಇದರಿಂದ ಏನಾಗಲುಂಟು?’ ಎಂದು ಪ್ರಶ್ನಿಸುತ್ತದೆ ಈ ಕಗ್ಗ.
ಶಕ್ತಿಕೇಂದ್ರವಾದ ದೇಗುಲವನ್ನು ಸಂದರ್ಶಿಸಲು ಹೊರಟವನು ಹೊರಭಾಗದಲ್ಲಿರುವ ಶಿಲ್ಪಕಲಾ ಸೌಂದರ್ಯ, ಶಿಲಾಬಾಲಿಕೆಯರನ್ನು ನೋಡುತ್ತ ಹೊರಾಂಗಣದಲ್ಲೇ ಉಳಿದುಹೋದಂತೆ ಜೀವನದಲ್ಲೂ ಮನುಜರು ಕಳೆದುಹೋಗುವುದಿದೆ. ಕ್ಷಣಿಕ ಸುಖ-ಸಂತೋಷಗಳಲ್ಲಿ ಪರವಶರಾಗುತ್ತ, ಸಂಸಾರದ ಜಂಜಾಟಗಳಲ್ಲಿ ತೊಳಲಾಡುತ್ತ ದುಃಖ, ಭಯ, ಮೋಹ, ನೋವು, ಪ್ರೇಮ ಮುಂತಾದ ಲೌಕಿಕ ಅವಸ್ಥೆಗಳಲ್ಲಿ ಒದ್ದಾಡುವುದುಂಟು. ಆಗ ದೇವತೆಗಳು ಘೊರ ರೂಪವನ್ನು, ಸನ್ನಿವೇಶಗಳನ್ನು ಎದುರಿಗಿಟ್ಟು ಹೆದರಿಸುತ್ತಾರೆ, ಆಕರ್ಷಣೆಗಳನ್ನೊಡ್ಡಿ ದಾರಿ ತಪ್ಪಿಸುತ್ತಾರೆ. ಮದವೇರಿದ ಆನೆಯಂತೆ ಮದೋನ್ಮತ್ತ ಮನುಜನನ್ನು ಯಾವುದೋ ರೂಪದಲ್ಲಿ ದಂಡಿಸುತ್ತಾರೆ. ಅಂಜಿಕೆ, ಯಾಚಕತೆಯಲ್ಲೇ ಬದುಕಿರುವಂತೆ ಮಾಡುತ್ತಾರೆ. ವ್ಯಕ್ತಿ ತನ್ನ ಅರಿವನ್ನು ಶರೀರಕ್ಕಷ್ಟೇ ಸೀಮಿತ ಮಾಡಿಕೊಂಡಿರುವುದೇ ಹೀಗಾಗಲು ಕಾರಣ. ಪಾರಲೌಕಿಕ ಚಿಂತನೆಗಳು ಅವನ ಆಂತರ್ಯವನ್ನು ಸೋಕಿರುವುದೇ ಇಲ್ಲ. ಹಾಗಾಗಿ ಬದುಕಿನಲ್ಲಿ ಬಗೆಬಗೆಯ ಕಷ್ಟ-ಕಾರ್ಪಣ್ಯ, ದಯನೀಯ ಸ್ಥಿತಿಯನ್ನು ಅನುಭವಿಸುತ್ತಾನೆ.
ಜೀವನವೆಂದರೆ ಬೇಡುವುದು, ಕಾಡುವುದು, ನರಳುವುದು ಅಷ್ಟೇ ಅಲ್ಲ. ಉನ್ನತ ಉದ್ದೇಶವನ್ನಿಟ್ಟುಕೊಂಡು ಯಾತ್ರೆ ಹೊರಟಿರುವ ಆತ್ಮನನ್ನು ಗ್ರಹಿಸುವ, ಎಲ್ಲರಲ್ಲೂ ಕಾಣುವ ಜ್ಞಾನವು ಜಾಗೃತವಾಗಬೇಕು. ಆಗ ಇಹಜೀವನದ ಏಳುಬೀಳುಗಳು ವ್ಯಕ್ತಿಯನ್ನು ಕಂಗೆಡಿಸವು. ಆತನ ಲಕ್ಷ್ಯವು ಸರ್ವಶ್ರೇಷ್ಠ ಪುರುಷಾರ್ಥವಾದ ಪರಮಾರ್ಥವನ್ನು ಪಡೆಯುವುದರತ್ತ ನೆಟ್ಟಿರುತ್ತದೆ. ಹೀಗೆ ಪಾರಮಾರ್ಥಿಕತೆಯ ಪಥದಲ್ಲಿ ಮುನ್ನಡೆಯುವ ವ್ಯಕ್ತಿಯು ದೇವತೆಗಳಿಂದ ಪರೀಕ್ಷೆಗೆ ಒಳಪಡುತ್ತಾನೆ. ಅವರು ಮತ್ತೆಮತ್ತೆ ಇಚ್ಛಾಶಕ್ತಿಯನ್ನು ಕುಂದಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಭಗವಂತನ ದರ್ಶನಕ್ಕೆ ಆವಶ್ಯಕವಾದ ಮನಸ್ಸು, ದೇಹದ ಸಮಾಧಾನ, ಸ್ವಾಸ್ಥ್ಯ ಕಳೆದುಕೊಳ್ಳಬಾರದೆಂದರೆ ಪ್ರಕೃತಿಯು ಅನುಕೂಲಳಾಗಿರಬೇಕು. ಲೋಕ ಜೀವನವನ್ನು ಮಾಡುತ್ತ ಅಲ್ಲೇ ಉಳಿದು ಹೋಗದೆ ಮುಂದುವರಿಯಬೇಕು. ಇವೆಲ್ಲದಕ್ಕೂ ಅನುವು ಮಾಡಿಕೊಡುವವರು ದೇವತೆಗಳು. ಹಾಗಾಗಿ ಯಾವುದೇ ಕೆಲಸಕ್ಕೂ ಮೊದಲು ಅವರಿಗೆ ಪ್ರಾರ್ಥನೆ ಸಲ್ಲಿಸಿ ಕೃಪೆ ಬೇಡುವ ಪದ್ಧತಿಯಿದೆ. ಯಾರು ಪರಬ್ರಹ್ಮನೆಡೆಗೆ ದೃಷ್ಟಿ ನೆಟ್ಟಿರುತ್ತಾರೋ, ಭಗವಂತನನ್ನೇ ಅಚಲವಾಗಿ ನಂಬಿರುತ್ತಾರೋ, ಆತನನ್ನು ಈ ಬಗೆಯ ತಾಪಗಳು ಕಂಗೆಡಿಸವು. ಅವು ಆತ್ಮೋತ್ಕರ್ಷಕ್ಕೆ ಪೋಷಕವಾಗುತ್ತವೆ. ಸ್ವಶಕ್ತಿ ಅಭಿವೃದ್ಧಿಗೊಂಡು ಆತ್ಮವಿಕಾಸಕ್ಕೆ ಕಾರಣವಾಗುತ್ತದೆ.