ಹೈದರಾಬಾದ್: ವಿಚಿತ್ರ ಲುಕ್ನಿಂದ ಮಾತ್ರವಲ್ಲದೇ ಕಡಿಮೆ ಕೊಬ್ಬಿನಂಶದೊಂದಿಗೆ ಮಾಂಸದ ಬಗೆಗಳಲ್ಲಿ ಆರೋಗ್ಯಕರ ಎನಿಸಿಕೊಂಡಿರುವ ಕಡಕ್ನಾಥ್ ಚಿಕನ್ ಇದೀಗ ಹೈದರಾಬಾದ್ನಲ್ಲಿ ತುಂಬಾ ದುಬಾರಿಯಾಗಿದೆ.
ಕಡಕ್ನಾಥ್ ಕೋಳಿ ಮಾಂಸ ಕೆಜಿಗೆ 1000 ರೂಪಾಯಿಯಿಂದ 1200 ರೂ. ವರೆಗೂ ಮಾರಾಟವಾಗುತ್ತದೆ. ಈಗಾಗಲೇ ದುಬಾರಿ ಎನಿಸಿಕೊಂಡಿರುವ ಮಟನ್ ಸಹ ಕಡಕ್ನಾಥ್ ಮುಂದೆ ಅಗ್ಗ ಎನಿಸಿಕೊಂಡಿದೆ. ಒಂದು ಕೆಜಿ ಮಟನ್ಗೆ ತಗಲುವ ಖರ್ಚಿನಲ್ಲಿ ಅರ್ಧ ಕೆಜಿ ಕಡಕ್ನಾಥ್ ಚಿಕನ್ ಬರುತ್ತದೆ.
ಇನ್ನು ಈ ಕಡಕ್ನಾಥ್ ತಳಿಯ ಮೂಲ ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಮತ್ತು ಗುಜರಾತ್ ಹಾಗೂ ರಾಜಸ್ಥಾನದ ಕೆಲವು ಭಾಗಗಳು. ಅದರಲ್ಲೂ ಇಂತಹ ಕೋಳಿಗಳು ಹೆಚ್ಚು ಬುಡಕಟ್ಟು ಸಮುದಾಯದಲ್ಲಿ ಕಂಡುಬರುತ್ತವೆ. ಈ ಕೋಳಿಯ ವಿಶೇಷ ಕೊಕ್ಕಿನಿಂದ ಹಿಡಿದು ಕಾಲ ತುದಿಯವರೆಗೂ ಕಪ್ಪು ಬಣ್ಣದಿಂದ ಕೂಡಿದೆ. ಅಲ್ಲದೆ, ಅದರ ಮಾಂಸ ಮತ್ತು ಮೊಟ್ಟೆಯು ಸಹ ಕಪ್ಪು ಬಣ್ಣವೇ.
ಈ ಕೋಳಿಗಳನ್ನು ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ. ಬೆಳೆದು ಸಾಮಾನ್ಯ ಗಾತ್ರಕ್ಕೆ ಬರಲು 8 ತಿಂಗಳು ತೆಗೆದುಕೊಳ್ಳುತ್ತದೆ. ಆದರೆ, ಬಾಯ್ಲರ್ ಕೋಳಿಗಳು ಕೇವಲ 45 ದಿನಗಳಲ್ಲಿ ದಪ್ಪದಾಗುತ್ತವೆ. ಅನೇಕ ನಗರಗಳಿಗೆ ಕಡಕ್ನಾಥ್ ಮಾಂಸವನ್ನು ಪೂರೈಸುವ ಕಡಕ್ನಾಥ್ ಚಿಕನ್ ಫಾರ್ಮ್ಸ್ ಹೇಳುವಂತೆ ಪ್ರತಿ ಕೋಳಿಯ ಸಂತಾನೋತ್ಪತ್ತಿಗೆ 500 ರೂ. ವೆಚ್ಚವಾಗುತ್ತದೆ. ಈ ಕೋಳಿ ಪ್ರತಿದಿನ 100 ಗ್ರಾಂ ಆಹಾರ ತಿನ್ನುತ್ತದೆ ಎಂದಿದ್ದಾರೆ.
ಹೀಗಾಗಿ ಕೋಳಿ ಮಾಂಸ ತುಂಬಾ ದುಬಾರಿಯಾಗಿದೆ. ಇನ್ನು ಮೊಟ್ಟೆಯು ಕೂಡ ಕಡಿಮೆಯೇನಲ್ಲ. ಒಂದು ಮೊಟ್ಟೆಗೆ 30 ರೂ. ದರವಿದೆ. ಕಡಕ್ನಾಥ್ ಕೋಳಿಯ ಮಾಂಸ ಮತ್ತು ಮೊಟ್ಟೆ ಪೌಷ್ಟಿಕಾಂಶಗಳ ಆಗರವೆಂದೇ ನಂಬಲಾಗಿದೆ. ಅದರಲ್ಲೂ ಅಧಿಕ ರಕ್ತದೊತ್ತಡ ಇರುವ ಹಿರಿಯ ನಾಯಕರಿಗೆ ತುಂಬಾ ಉಪಯುಕ್ತವಂತೆ. ಹೀಗಾಗಿ ಈ ಕೋಳಿಗೆ ಇವು ಡಿಮ್ಯಾಂಡ್ ಮೇಲೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದೆ. (ಏಜೆನ್ಸೀಸ್)