ಫೆನೋಮ್ ಪೆನ್: ವಿಶ್ವದ ಏಕಾಂಗಿ ಆನೆಯೆಂದೇ ಪ್ರಸಿದ್ಧಿಯಾಗಿರುವ "ಕಾವನ್" ಆನೆಗೆ ಇದೀಗ ಮೂವರು ಗೆಳತಿಯರು ಸಿಕ್ಕಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಮೂರು ಹೆಣ್ಣಾನೆಗಳಲ್ಲಿ ಒಂದರ ಮೇಲೆ ಕಾವನ್ ಹೆಚ್ಚು ಆಸಕ್ತಿ ತೋರುತ್ತಿದ್ದಾನೆಂದು ಆತನ ಪರಿಪಾಲಕ ತಿಳಿಸಿದ್ದು, ಕಾವನ್ಗೆ ಪ್ರೇಮಾಂಕುರವಾಗಿದೆ ಎಂದು ಅರ್ಥೈಸಲಾಗಿದೆ.
ಅಂದಹಾಗೆ 35 ವರ್ಷದ ಏಷ್ಯಾ ಆನೆ ಕಾವನ್ ಕಳೆದ ತಿಂಗಳವರೆಗೂ ಪಾಕಿಸ್ತಾನದ ಇಸ್ಲಮಾಬಾದ್ ಮೃಗಾಲಯದಲ್ಲಿ ಒಬ್ಬಂಟಿಯಾಗಿ ಶೋಕಿಸುತ್ತಿದ್ದ. ಕಾವನ್ ಸಂಗಾತಿ ಆನೆ 2012ರಲ್ಲಿ ಇಸ್ಲಮಾಬಾದ್ನ ಮಾರ್ಘಜರ್ ಮೃಗಾಲಯದಲ್ಲಿ ಕಾಯಿಲೆಯಿಂದ ಮೃತಪಟ್ಟಾಗಿನಿಂದ ಕಾವನ್ ಒಂಟಿಯಾಗಿ ದಿನ ದೂಡುತ್ತಿತ್ತು.
ಆನೆಯ ಮೂಕರೋಧನೆ ನೋಡಿದ ಪ್ರಾಣಿ ಪ್ರಿಯರು ಸಾಕಷ್ಟು ಅಭಿಯಾನ ನಡೆಸಿದ್ದರು. ಯಾರೇ ಆಗಲಿ ಜೀವನದಲ್ಲಿ ಒಬ್ಬಂಟಿಯಾಗಿ ಬದುಕುವುದು ಕಷ್ಟ. ಒಬ್ಬರಿಗೊಬ್ಬರ ಆಶ್ರಯ ಬೇಕೇ ಬೇಕು. ಹೀಗಾಗಿ ಒಂಟಿಯಾಗಿ ಕಾವನ್ ಪರ ಪ್ರಾಣಿ ಪ್ರಿಯರು ಧ್ವನಿಯೆತ್ತಿದ್ದರ ಪರಿಣಾಮ 2020, ನವೆಂಬರ್ 30ರಂದು ಕಾಂಬೋಡಿಯಾ ಸರ್ಕಾರ ತನ್ನ ದೇಶಕ್ಕೆ ಕಾವನ್ನನ್ನು ಕರೆಸಿಕೊಂಡಿತು. ಸದ್ಯ ಕಾವನ್ ಕಾಂಬೋಡಿಯಾದ ಕುಲೆನ್ ಫ್ರುಮ್ ಟೆಪ್ ವನ್ಯಜೀನ ಅಭಯಾರಣ್ಯದಲ್ಲಿ ಮೂವರು ಗೆಳತಿಯರೊಂದಿಗೆ ಸಂತಸದ ಕ್ಷಣ ಆನಂದಿಸುತ್ತಿದ್ದಾನೆ.
ಸಾಕಷ್ಟು ದಿನಗಳಿಂದ ಒಬ್ಬಂಟಿಯಾಗಿದ್ದ ಕಾವನ್, ನಿಧಾನವಾಗಿ ಇನ್ನಿತರ ಆನೆಗಳೊಂದಿಗೆ ಬೆರೆಯುತ್ತಿದ್ದಾನೆ. ಕಾವನ್ ಸಂಪೂರ್ಣವಾಗಿ ಆನೆಗಳೊಂದಿಗೆ ಒಗ್ಗಿಕೊಂಡರೆ ಇನ್ನು ಕೆಲವೇ ತಿಂಗಳಲ್ಲಿ ಮೂರು ಹೆಣ್ಣಾನೆಗಳೊಂದಿಗೆ ಅಭಯಾರಣ್ಯದಲ್ಲಿ ಮುಕ್ತವಾಗಿ ಓಡಾಡಿಕೊಂಡು ಇರಲು ಬಿಡಲಾಗುತ್ತದೆ.
ಮೂವರು ಆನೆಗಳೊಂದಿಗೆ ಕಾವನ್ ಹೊಂದಿಕೊಂಡಿದ್ದಾನೆ. ಆದರೆ, ಒಂದು ಆನೆಯ ಮೇಲೆ ಹೆಚ್ಚು ಆಸಕ್ತಿ ತೋರುತ್ತಿರುವುದು ಪರಿಪಾಲಕನ ಗಮನಕ್ಕೆ ಬಂದಿದೆ ಎಂದು ಕಾಂಬೋಡಿಯಾ ವನ್ಯಜೀವಿ ಅಭಯಾರಣ್ಯದ ಅಧ್ಯಕ್ಷ ಹಾಗೂ ಕಾವನ್ ಪರಿಪಾಲಕ ಸಾಕ್ ಹಾಂಗ್ ಹೇಳಿದ್ದಾರೆ.
ಕಾವನ್ ಮೇಲೆ ಸಾಕಷ್ಟು ಗಮನ ಇರಿಸಲಾಗಿದ್ದು, ಅದರ ಚಲನಾವಲನವನ್ನು ಪ್ರತಿ ಕ್ಷಣ ಗಮನಿಸುತ್ತಾ, ಇತರೆ ಜೀವಿಗಳಂತೆ ಆರಾಮಾಗಿ ಓಡಾಡಿಕೊಂಡು ಇರುವಂತೆ ತಯಾರಿ ಮಾಡಲಾಗುತ್ತಿದೆ. ಪಾಕಿಸ್ತಾನದ ಮೃಗಾಲಯದಲ್ಲಿ ಒಬ್ಬಂಟಿಯಾಗಿದ್ದ ಕಾವನ್ ಮನಸ್ಸಿಗೆ ತುಂಬಾ ಘಾಸಿಯಾಗಿತ್ತು. ಸಂಗಾತಿಯಿಲ್ಲದೆ ಜೀವನದಲ್ಲಿ ತುಂಬಾ ರೋಧಿಸಿತ್ತು. ಈಗಲೂ ಸಹ ಕಾವನ್ ತನ್ನ ಹಳೆಯ ಸಂಗಾತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆಂದು ಸಾಕ್ ಹಾಂಗ್ ತಿಳಿಸಿದ್ದಾರೆ.
ಅಲ್ಲದೆ, ಕಾವನ್ ಎಲ್ಲರಂತಾಗಿ, ಎಲ್ಲರೊಂದಿಗೆ ಬೆರೆತು ಮುಂದೆ ಕಾಂಬೋಡಿಯಾಗೆ ಅನೇಕ ಆನೆ ಮರಿಗಳನ್ನು ಕೊಡುಗೆಯಾಗಿ ನೀಡುತ್ತಾನೆಂಬ ಭರವಸೆ ಇದೆ ಎಂದು ಸಾಕ್ ಹಾಂಗ್ ಹೇಳಿದ್ದಾರೆ. (ಏಜೆನ್ಸೀಸ್)