ನ್ಯೂಸ್

ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ ಖ್ಯಾತ ಪಾಪ್ ಗಾಯಕಿ; ಕಾರಣ ನಿಗೂಢ

ನವದೆಹಲಿ: ದಕ್ಷಿಣ ಕೊರಿಯಾದ ಖ್ಯಾತ ಪಾಪ್​ ಗಾಯಕಿ ಪಾರ್ಕ್​ ಬೊ ರಾಮ್​ ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ 30 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಗಾಯಕಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯ ಸಾವಿನ ಸುತ್ತ ಅನುಮಾನದ ಹುತ್ತವೇ ನಿರ್ಮಾಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಏಪ್ರಿಲ್​ 11ರಂದು ತಡರಾತ್ರಿವರೆಗೂ ಗಾಯಕಿ ಆಕೆಯ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ವಾಶ್​​ರೂಮ್​ಗೆ ತೆರಳಿದ ಅವರು ತುಂಬಾ ಹೊತ್ತು ಕಳೆದರೂ ವಾಪಸ್​ ಬಾರದೇ ಇರುವುದನ್ನು ಗಮನಿಸಿದ ಅವರ ಸ್ನೇಹಿತರು ತೆರಳಿ ಪರಿಶೀಲಿಸಿದಾಗ ಆಕೆ ಎಚ್ಚರ ತಪ್ಪಿ ಬಿದ್ದಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಗಾಯಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.