ನವದೆಹಲಿ: ಮಧ್ಯಪ್ರದೇಶ ರಾಜ್ಯ ರಾಜಕಾರಣ ಹಲವು ಟ್ವಿಸ್ಟ್ಗಳೊಂದಿಗೆ ಸಾಗಿದ್ದು, ಇದೀಗ ಕಾಂಗ್ರೆಸ್ ಬಂಡಾಯ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆ. ಕಾಂಗ್ರೆಸ್ ಸರ್ಕಾರದ ಅಸ್ತಿತ್ವಕ್ಕೆ ಕೊಡಲಿ ಏಟು ನೀಡಿರುವ ಗ್ವಾಲಿಯರ್ ರಾಜಮನೆತನದ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ರಾಜ್ಯಸಭೆಯ ಮೂಲಕ ಸಂಸತ್ತಿಗೆ ಕರೆತರುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸಿಂಧ್ಯಾ ಅವರ ಬೆಂಬಲಿಗ 18 ಶಾಸಕರು ಕಮಲನಾಥ ಅವರ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಂಡರೆ, ಬಿಜೆಪಿ ಕೂಡಲೇ ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆ. ಅಲ್ಲಿನ ಸರ್ಕಾರ ಪತನಗೊಂಡು ಮತ್ತೆ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಸಿಗುವ ರಾಜಕೀಯ ಲೆಕ್ಕಾಚಾರ ನಡೆದಿದೆ. ಮೂರು ಸಲ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಏರಲು ಸಿದ್ಧತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಮಾರ್ಚ್ 16ರಂದು ವಿಧಾನಸಭೆ ಅಧಿವೇಶ ಆರಂಭವಾಗುತ್ತಿದ್ದಂತೆ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆ. ಇದೇ ವೇಳೆ, ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭಿನ್ನಮತೀಯ ಶಾಸಕರ ಜೊತೆಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. (ಏಜೆನ್ಸೀಸ್)