ನ್ಯೂಸ್

ಗೋಣಿಚೀಲ ಗೋಲ್ಮಾಲ್!; ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಭ್ರಷ್ಟಾಚಾರ..

Webdesk - Ravikanth

| ಹರೀಶ್ ಬೇಲೂರು ಬೆಂಗಳೂರು

ಹೆಸರಿಗೆ ಟೆಂಡರ್...! ಆದರೆ ಖರೀದಿಯೇ ಆಗಲ್ಲ. ರೈತರಿಗೆ ಹಣ ಪಾವತಿಯಾಗೋದು ಲೆಕ್ಕದಲ್ಲಷ್ಟೇ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಭ್ರಷ್ಟಾಚಾರದ ಪರಿಯಿದು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ರಾಗಿ, ಭತ್ತ ಮತ್ತು ಮೆಕ್ಕೆಜೋಳ ರೈತರಿಗೆ ಉಚಿತವಾಗಿ ಗೋಣಿಚೀಲ (ಗನ್ನಿ ಬ್ಯಾಗ್) ವಿತರಣೆ ಹೆಸರಿನಲ್ಲಿ ಅಕ್ರಮ ನಡೆದಿದೆ. ರೈತರಿಗೆ ಚೀಲವನ್ನೂ ಕೊಡದೆ, ಹಣವನ್ನೂ ಕೊಡದೆ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಕೋಟಿಗಟ್ಟಲೆ ದುಡ್ಡನ್ನು ರೈತರ ಹೆಸರೇಳಿಕೊಂಡು ನಿಗಮದ ಅಧಿಕಾರಿಗಳೇ ಜೇಬಿಗಿಳಿಸಿದ್ದಾರೆ.

ಗೋಣಿಚೀಲ ಖರೀದಿ ಹಗರಣವನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ 7 ನಿರ್ದೇಶಕರೇ ಬೆಳಕಿಗೆ ತಂದಿದ್ದಾರೆ. ಲಕ್ಷಾಂತರ ರೈತರ ಹೆಸರಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಕರು ಸರ್ಕಾರಕ್ಕೆ ಲಿಖಿತ ದೂರು ನೀಡಿದ್ದಾರೆ. ಆದರೆ, ಸರ್ಕಾರ ಇದುವರೆಗೆ ಕ್ರಮ ಕೈಗೊಳ್ಳುವ ಬಗ್ಗೆ ಆಸಕ್ತಿ ತೋರಿಸಿಲ್ಲ. ಮೊದಲಿಗೆ ಟೆಂಡರ್​ನಲ್ಲಿ ಎಲ್1 (ಪ್ರಥಮ ಕಂಪನಿ) ಪಡೆದ ಕಂಪನಿಯಿಂದ ಕೇವಲ ಶೇ.2 ಗೋಣಿಚೀಲಗಳನ್ನಷ್ಟೇ ಸರಬರಾಜು ಮಾಡುವಂತೆ ನಿಗಮ ಕೋರಿತ್ತು. ರೈತರು ಕೇಳಿದರೆ ಮಾತ್ರ ಅವರಿಗೆ 22 ರೂ.ನಂತೆ ಹಣ ನೀಡುವಂತೆ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಚೀಲ ಖರೀದಿಸದಿದ್ದರೂ ಸರಬರಾಜುದಾರರಿಂದ ಒಂದು ಚೀಲಕ್ಕೆ ತಲಾ 5 ರೂ.ನಂತೆ 3 ಕೋಟಿ ರೂ. ಲಂಚ ಅಧಿಕಾರಿಗಳಿಗೆ ಹೋಗಿದೆ ಎಂಬ ಆರೋಪವಿದೆ. ಎಲ್ಲ ಸರಬರಾಜುದಾರರು ನಕಲಿ ದಾಖಲಾತಿಗಳನ್ನು ಸಲ್ಲಿಸಿ, ಟೆಂಡರ್ ಪಡೆದುಕೊಂಡಿದ್ದಾರೆ.

ಗೋಣಿಚೀಲ ಪೂರೈಸುವುದಾಗಿ ಟೆಂಡರ್ ಪಡೆದುಕೊಂಡ ಕಂಪನಿಗಳು ಗೋಣಿಚೀಲಗಳನ್ನು ಸರಬರಾಜು ಮಾಡಿಲ್ಲ. ಕೆಲ ಜಿಲ್ಲೆಗಳಲ್ಲಿ ಖರೀದಿ ಮುಗಿದ ನಂತರವೂ ಗೋಣಿಚೀಲಗಳು ಸರಬರಾಜು ಆಗಿಲ್ಲ. ರೈತರಿಗೆ ಹಣವಾಗಲಿ ಅಥವಾ ಚೀಲವಾಗಲಿ ತಲುಪಿಲ್ಲ. ಜಿಎಸ್​ಟಿ ಕಾಯ್ದೆ ಅನ್ವಯ ಯಾವುದೇ ಸರಕು 50 ಸಾವಿರ ರೂ. ಮೇಲ್ಪಟ್ಟರೆ ಕಡ್ಡಾಯವಾಗಿ ಇ-ವೇ ಬಿಲ್ ಮುಖೇನ ಸರಬರಾಜು ಮಾಡಬೇಕು. ಆದರೆ, ಟೆಂಡರ್​ನಲ್ಲಿ ಭಾಗವಹಿಸಿದ ಎಲ್ಲ ಸರಬರಾಜುದಾರರು ಇ-ವೇ ಬಿಲ್ ಸಲ್ಲಿಸಿಲ್ಲ. ಸರಬರಾಜುದಾರರು ಕೇವಲ ಒಂದು ಬಿಳಿ ಹಾಳೆಯ ಮೇಲೆ ಕೋಟ್ಯಂತರ ರೂ. ಬಿಲ್ ನೀಡಿದ್ದಾರೆ. ನಿಗಮದ ಮುಖ್ಯಸ್ಥರು, ಸಮಿತಿ ರಚಿಸದೆ ಖುದ್ದು ಹಣ ಬಿಡುಗಡೆ ಮಾಡಿದ್ದಾರೆ ಎಂದು ನಿಗಮದ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗೋಣಿಚೀಲ ಪಡೆಯಿರಿ: ಯೋಜನೆಯಡಿ ಕೇಂದ್ರ ಸರ್ಕಾರ ಉಚಿತವಾಗಿ ಗೋಣಿಚೀಲವನ್ನು ರೈತರಿಗೆ ನೀಡುತ್ತಿದೆ. ಇದಕ್ಕಾಗಿ ನಿಗಮಕ್ಕೆ ಕೋಟ್ಯಂತರ ರೂಪಾಯಿ ಹಣ ಕೊಡುತ್ತಿದೆ. ಇದರ ಬಗ್ಗೆ ರಾಜ್ಯದ ಲಕ್ಷಾಂತರ ರೈತರಿಗೆ ಮಾಹಿತಿ ಇಲ್ಲ. ರಾಗಿ, ಭತ್ತ ಮತ್ತು ಜೋಳ ಮಾರಾಟ ಮಾಡುವ ರೈತರು, ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗೋಣಿಚೀಲ ಅಥವಾ ಅದಕ್ಕೆ ಬದಲಾಗಿ ಹಣ ಪಡೆಯಬಹುದು. ಒಂದು ವೇಳೆ ಅಧಿಕಾರಿಗಳು ನೀಡದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಬಹುದು.

ಏನೇನು ಖರೀದಿ?: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸಲು 2021-22ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯಾದ್ಯಂತ ರೈತರಿಂದ 5.24 ಲಕ್ಷ ಮೆಟ್ರಿಕ್ ಟನ್ ರಾಗಿ, 5 ಲಕ್ಷ ಮೆಟ್ರಿಕ್ ಟನ್ ಭತ್ತ ಹಾಗೂ 1.25 ಲಕ್ಷ ಕ್ವಿಂಟಾಲ್ ಜೋಳವನ್ನು ನಿಗಮ ಖರೀದಿಸಿದೆ. ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಆಹಾರ ಸರಬರಾಜು ಮಾಡಲು ಸಾವಿರಾರು ಕ್ವಿಂಟಾಲ್ ತೊಗರಿ ಬೇಳೆ ಸೇರಿ ಇತರೆ ದವಸ ಧಾನ್ಯಗಳನ್ನು ಖರೀದಿಸಿದೆ.

ಮುಖ್ಯಾಂಶಗಳು

  • ಟೆಂಡರ್ ನೀಡಿಕೆಯಲ್ಲಿ ನಿಯಮ ಉಲ್ಲಂಘನೆ
  • ಕೋಟ್ಯಂತರ ರೂಪಾಯಿ ಅಕ್ರಮ ಪತ್ತೆ
  • ನಿರ್ದೇಶಕರಿಂದಲೇ ಸರ್ಕಾರಕ್ಕೆ ದೂರು
ಗೋಣಿಚೀಲ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. | ಶಿವಾನಂದ ಕಾಪಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ

ಅಕ್ರಮ ಹೇಗೆ?

  • ಧಾನ್ಯ ಸಂಗ್ರಹಕ್ಕಾಗಿ 24 ಕೋಟಿ ರೂ. ವೆಚ್ಚದಲ್ಲಿ 64,55,61 ಗೋಣಿಚೀಲ ಖರೀದಿಗೆ ಪ್ರಸ್ತಾವನೆ
  • 2022ರ ಫೆಬ್ರವರಿಯಲ್ಲಿ ಜೆಮ್ ಪೋರ್ಟಲ್​ನಲ್ಲಿ ಟೆಂಡರ್ ಆಹ್ವಾನ. 10 ಕಂಪನಿಗಳಿಗೆ ಕಾರ್ಯಾದೇಶ
  • ಬೇಕಾದ ಕಂಪನಿಗಳಿಗೆ ಟೆಂಡರ್ ಕೊಟ್ಟು, ಒಬ್ಬೊಬ್ಬರಿಗೆ ಒಂದೊಂದು ದರ ನಿಗದಿ
  • ಟೆಂಡರ್ ಪ್ರಕ್ರಿಯೆಗೆ ಮುನ್ನ ಸಮಿತಿ ರಚಿಸಿ, ಬಿಡ್​ದಾರರ ದಾಖಲೆ ಪರಿಶೀಲಿಸದೆ ಒಪ್ಪಿಗೆ
  • ಕೆಲ ಕಂಪನಿಗಳಿಂದ 2020-21 ಮತ್ತು 2021-22ರ ವಹಿವಾಟು ಮತ್ತು ಆದಾಯದ ನಕಲಿ ಪ್ರಮಾಣಪತ್ರ ಸಲ್ಲಿಕೆ
  • ಕೇಂದ್ರ, ರಾಜ್ಯ ಅಥವಾ ಸರ್ಕಾರಿ ಉದ್ದಿಮೆಗಳಿಗೆ ಸರಬರಾಜು ಮಾಡಿ ರುವ ದಾಖಲಾತಿಗಳನ್ನು ಸಲ್ಲಿಸಿಲ್ಲ
  • ಆದಾಯ ಪ್ರಮಾಣಪತ್ರವನ್ನು ಲೆಕ್ಕ ಪರಿಶೋಧನಾಧಿಕಾರಿಗಳಿಂದ ಪಡೆಯದ ಆರೋಪ
  • ಅರ್ಹತೆ ಇಲ್ಲದಿದ್ದರೂ ಎಲ್ಲ 10 ಕಂಪನಿಗಳಿಗೆ ಕಾರ್ಯಾದೇಶ ಪತ್ರ ಹಂಚಿಕೆ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಇದುವರೆಗೆ ಗೋಣಿಚೀಲ ಅಥವಾ ಹಣ ಕೊಟ್ಟಿಲ್ಲ. ನಮ್ಮ ಹೆಸರಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. | ಕುರುಬೂರು ಶಾಂತಕುಮಾರ್ ರಾಜ್ಯ ರೈತ ಸಂಘಟನೆಗಳ ಅಧ್ಯಕ್ಷ

ನಿಯಮ ಏನು?

  • ಧಾನ್ಯ ತಂದ ರೈತರಿಗೆ ಅವರ ಚೀಲಕ್ಕೆ ಬದಲಾಗಿ ನಿಗಮದಿಂದ ಚೀಲಗಳನ್ನು ವಾಪಸ್ ಕೊಡಬೇಕು
  • ಒಂದು ವೇಳೆ ರೈತ ಚೀಲ ಪಡೆಯಲು ನಿರಾಕರಿಸಿದರೆ ತಲಾ ಚೀಲಕ್ಕೆ 22 ರೂಪಾಯಿ ಕೊಡಬೇಕು
  • ಉಚಿತವಾಗಿ ನೀಡುವ ಚೀಲ ಅಥವಾ ಹಣವನ್ನು ಕೇಂದ್ರ ಸರ್ಕಾರವೇ ಬಿಡುಗಡೆ ಮಾಡುತ್ತದೆ
  • ಖರೀದಿ ಕೇಂದ್ರಗಳಲ್ಲಿ ಉಚಿತ ಚೀಲ ಕೊಡುವ ಅಥವಾ ಬದಲಿಗೆ ಹಣ ಕೊಡುವ ಮಾಹಿತಿ ರೈತರಿಗೆ ಇಲ್ಲ
  • ಚೀಲ ಕೊಡದಿದ್ದರೂ ಕೊಟ್ಟಿರುವುದಾಗಿ ಗ್ರೇನ್ ವೋಚರ್​ನಲ್ಲಿ ರೈತರಿಂದ ಸಹಿ ಪಡೆದು ವಂಚನೆ
ನಿಗಮಕ್ಕೆ ಚೀಲ ಖರೀದಿ ಜವಾಬ್ದಾರಿ

ಆಹಾರ ಇಲಾಖೆ ಅಧೀನಕ್ಕೆ ಬರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ 1973ರಲ್ಲಿ ಸ್ಥಾಪನೆಯಾಗಿದೆ. ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ, ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಆಹಾರ ಸರಬರಾಜು ಹಾಗೂ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ, ಭತ್ತ ಮತ್ತು ಮೆಕ್ಕೆಜೋಳ ಸೇರಿ ವಿವಿಧ ಧಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡುವ ಜವಾಬ್ದಾರಿಯನ್ನು ನಿಗಮಕ್ಕೆ ವಹಿಸಲಾಗಿದೆ. ಈ ಉದ್ದೇಶಕ್ಕಾಗಿ ಖರೀದಿ ಜತೆಗೆ, ರೈತರಿಗೆ ಪ್ರತಿ ಗೋಣಿಚೀಲಕ್ಕೆ 22 ರೂ.ನಂತೆ ನಿಗದಿಪಡಿಸಿ ಕೋಟ್ಯಂತರ ರೂಪಾಯಿಯನ್ನು ನಿಗಮಕ್ಕೆ ನೀಡಲಾಗುತ್ತಿದೆ. ಪ್ರಸಕ್ತ ವರ್ಷವೂ ಈ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ನಿಗಮಕ್ಕೆ ವಹಿಸಿಕೊಟ್ಟಿದೆ.